ಮೈಸೂರು: ವೈದ್ಯರು ಮೊದಲು ಮಾನವೀಯತೆ ಬೆಳೆಸಿಕೊಳ್ಳಬೇಕು. ಏಕೆಂದರೆ ನಮ್ಮ ಒಡನಾಟವಿರುವುದೆಲ್ಲ ಜೀವಂತ ಮಾನವರೊಂದಿಗೆ. ಆದ್ದರಿಂದ ಅಂತಃಕರಣ, ಸಹೃದಯತನವನ್ನು ಮೈಗೂಡಿಸಿಕೊಂಡಷ್ಟು ವೃತ್ತಿಯಲ್ಲಿ ಸಂತೃಪ್ತಿ ಕಾಣಬಹುದು ಎಂದು ಮುಂಬೈನ ಲೀಲಾವತಿ ಆಸ್ಪತ್ರೆಯ ಎಂಡೋಕ್ರಾನೋಲಾಜಿಸ್ಟ್ ವಿಭಾಗದ ಹಿರಿಯ ಸಮಾಲೋಚಕ, ಪದ್ಮಶ್ರೀ ಡಾ.ಶಶಾಂಕ್ ಆರ್.ಜೋಷಿ ಸಲಹೆ ನೀಡಿದರು.
ನಗರದ ಜೆಎಸ್‌ಎಸ್ ಮೆಡಿಕಲ್ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಪದವೀಧರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೈದ್ಯಕೀಯ ಕ್ಷೇತ್ರವು ನಿರಂತರ ಅಧ್ಯಯನದ ಜಾಗ. ಇಲ್ಲಿ ಕೊನೆಯೆಂಬುದೇ ಇಲ್ಲ. ಜೀವನ ಪರ್ಯಂತ ಹೊಸ-ಹೊಸ ವಿಚಾರಗಳನ್ನು, ನೂತನ ಆವಿಷ್ಕಾರಗಳನ್ನು ನಾವು ನಿತ್ಯ ಕಾಣಬಹುದಾಗಿದೆ. ಆದ್ದರಿಂದ ಸಣ್ಣ-ಪುಟ್ಟ ವಿಷಯಗಳಿಗೆ ಭ್ರಮನಿರಸನವಾಗದೇ ಏಕಾಗ್ರತೆಯಿಂದ ಗುರಿಯತ್ತ ಸಾಗಬೇಕು ಎಂದರು.
ವಿಶ್ವವೇ ಒಂದು ಹಳ್ಳಿ ಎಂಬ ಪರಿಕಲ್ಪನೆ ಪ್ರವರ್ಧಮಾನವಾಗಿರುವ ಈ ಕಾಲಘಟ್ಟದಲ್ಲಿ ವೈದ್ಯರು ಅವಶ್ಯವಾಗಿ ಸಂವಹನ ಕೌಶಲ ಬೆಳೆಸಿಕೊಳ್ಳಬೇಕು. ವೈದ್ಯಕೀಯ ವಿದ್ಯಾರ್ಥಿಗಳು ತಾವು ಓದುತ್ತಿರುವ ಸಮಯದಲ್ಲೇ ಸಂವಹನ ಕೌಶಲ ರೂಢಿಸಿಕೊಳ್ಳಬೇಕು. ಮುಂದೆ ವೈದ್ಯರಾದ ಸಮಯದಲ್ಲಿ ಬೇರೆ-ಬೇರೆ ಭಾಷೆಯ ಜನರು ತಮ್ಮನ್ನು ಭೇಟಿ ಮಾಡಲು ಬರುತ್ತಾರೆ. ಆಗ ತಾವು ನೂತನ ತಂತ್ರಜ್ಞಾನಗಳನ್ನು ಬಳಸಿಕೊಂಡು ಅವರ ಸಮಸ್ಯೆಯನ್ನು ನಿಮ್ಮ ಭಾಷೆಗೆ ಭಾಷಾಂತರ ಮಾಡಿಕೊಂಡು ಅವರಿಗೆ ಸಲಹೆ ನೀಡಿ ಕಳುಹಿಸಬೇಕು. ಇದು ಮೂಲ ವೈದ್ಯಕೀಯ ಧರ್ಮವಾಗಿದೆ ಎಂದರು.