ಮಂಗಳೂರು: ವೈದ್ಯರು ಕರ್ತವ್ಯ ನಿಷ್ಠೆ ಮತ್ತು ಸಮಯ ಪ್ರಜ್ಞೆ ಅಳವಡಿಸಿಕೊಂಡಾಗ ಯಶಸ್ಸು ಸಾಧ್ಯ. ಆರೋಗ್ಯ ಮತ್ತು ಶೈಕ್ಷಣಿಕ ಕಾರ್ಯಗಾರದ ಕ್ಷೇತ್ರಕ್ಕೆ ವೈದ್ಯರು ಪ್ರಾಧ್ಯನತೆ ನೀಡಬೇಕು ಎಂದು ನಿಟ್ಟೆ ವಿಶ್ವವಿದ್ಯಾಲಯದ ಪ್ರೊ.ಚಾನ್ಸಲರ್ ಡಾ. ಶಾಂತರಾಮ ಶೆಟ್ಟಿ ಹೇಳಿದರು.
ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಶಾಖೆಯ 2024-25 ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪದಗ್ರಹಣ ಅಧಿಕಾರಿಯಾಗಿ ಭಾಗವಹಿಸಿ ಮಾತನಾಡಿದರು.
ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಶಾಖೆಯು 94 ವರ್ಷಗಳ ಇತಿಹಾಸ ಹೊಂದಿದ್ದು ಸರ್ವ ವೈದ್ಯಕೀಯ ತಜ್ಞರ ಮಾತ್ರ ಸಂಸ್ಥೆಯಾಗಿದ್ದು ಸದಸ್ಯರ ವೃತ್ತಿಪರ ಸೇವೆಯ ರಕ್ಷಣೆ ಮತ್ತು ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. ಸಂಸ್ಥೆಗೆ ನೂತನ ಸದಸ್ಯರನ್ನು ಸೇರ್ಪಡಿಸಿ ವಿವಿಧ ಜನಪರ ಸೇವಾ ಮತ್ತು ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಗಾರವನ್ನು ಹಮ್ಮಿಕೊಂಡು ಯಶಸ್ಸು ಸಾಧಿಸಬೇಕೆಂದರು.
ನೂತನ ಅಧ್ಯಕ್ಷ ಡಾ. ಜೆಸ್ಸಿ ಮಾರಿಯ ಅಧ್ಯಕ್ಷತೆ ವಹಿಸಿದ್ದರು.
ಕ್ರೈಸ್ತ ಧರ್ಮಪ್ರಾಂತ್ಯೀಯ ಧರ್ಮಾಧ್ಯಕ್ಷ ಪೀಟರ್ ಪೌಲ್ ಸಲ್ದಾನ, ನಗರದ ಬಹ್ರ್ಮಕುಮಾರಿ ಕೇಂದ್ರ ಸಂಸ್ಥೆಯ ಮುಖ್ಯಸ್ಥರಾದ ವಿಶ್ವೇಶ್ವರಿ, ನೂರ್ ಅರಬಿಕ್ ಶಾಲೆಯ ವಿಭಾಗೀಯ ಮುಖ್ಯಸ್ಥ ಮಹಮ್ಮದ್ ಫರಾಹನ್ ನೆಡ್ವಿ, ನಿರ್ಗಮನ ಕೋಶಾಧಿಕಾರಿ ಡಾ. ಪ್ರಶಾಂತ್, ನಿರ್ಗಮನ ಮಹಿಳಾ ವೈದ್ಯಯರ ಸಂಘದ ಅಧ್ಯಕ್ಷೆ ಡಾ. ಪ್ರಭಾ ಅಧಿಕಾರಿ, ನೂತನ ಅಧ್ಯಕ್ಷೆ ಡಾ. ಮೀರಾ ರಾವ್, ನೂತನ ಕೋಶಾಧಿಕಾರಿ ಡಾ. ಮಧುಸೂಧನ್ ಉಪಸ್ಥಿತರಿದ್ದರು.
ನಿರ್ಗಮನ ಅಧ್ಯಕ್ಷ ಡಾ. ರಂಜನ್ ಸ್ವಾಗತಿಸಿದರು. ನಿರ್ಗಮನ ಕಾರ್ಯದರ್ಶಿ ಡಾ. ಅವಿನ್ ಆಳ್ವ ವಾರ್ಷಿಕ ವರದಿ ಮಂಡಿಸಿದರು. ನೂತನ ಕಾರ್ಯದರ್ಶಿ ಡಾ. ಅರ್ಚನಾ ಭಟ್ ವಂದಿಸಿದರು. ದೀಪಕ್ ಗಂಗೊಳ್ಳಿ, ಡಾ. ತಾನಿಯ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.