ಬೆಳಗಾವಿ: ಪ್ರಸ್ತುತ ತಂತ್ರಜ್ಞಾನ, ಯಂತ್ರಜ್ಞಾನ ಬಳಕೆ ಹೆಚ್ಚಾದಂತೆ ವೈದ್ಯಕಿಯ ಕ್ಷೇತ್ರದಲ್ಲಿ ಮಾನವೀಯ ಮೌಲ್ಯಗಳು ಕೂಡ ಕಡಿಮೆಯಾಗುತ್ತಿದೆ. ಪವಿತ್ರವಾದ ವೈದ್ಯ ವೃತ್ತಿಯನ್ನು ಕಾಪಾಡಿಕೊಂಡು ಹೋಗುವುದು ವೈದ್ಯರ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ ಎಂದು ಯುಎಸ್ಎಂ ಕೆಎಲ್ಇ ಐಎಂಪಿ ನಿರ್ದೇಶಕ ಡಾ.ಎಚ್.ಬಿ.ರಾಜಶೇಖರ್ ಹೇಳಿದರು.
ನಗರದ ಯಳ್ಳೂರ ರಸ್ತೆಯ ಕೆಎಲ್ಇ ಸಂಸ್ಥೆಯ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯಲ್ಲಿ ಮಂಗಳವಾರ ರಾಷ್ಟ್ರೀಯ ವೈದ್ಯರ ದಿನದ ಅಂಗವಾಗಿ ರಾಜ್ಯದ ನಂ.1 ದಿನಪತ್ರಿಕೆ ವಿಜಯವಾಣಿ ಹಾಗೂ ಕೆಎಲ್ಇ ಸಂಸ್ಥೆಯ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ವೈದ್ಯರು ಇತರರಿಗೆ ಮಾದರಿಯಾಗಿ ಗುರುತಿಸಿಕೊಳ್ಳಬೇಕು. ಪವಿತ್ರವಾದ ವೈದ್ಯ ವೃತ್ತಿಯಲ್ಲಿ ತಪ್ಪು ಮಾಡುವ ವೈದ್ಯರನ್ನು ತಿದ್ದಿ ಹೇಳುವ ಕೆಲಸವನ್ನು ಹಿರಿಯ ವೈದ್ಯರು ಮಾಡಬೇಕು. ಆದರೆ, ಕೆಲ ಕಿರಿಯ ವೈದ್ಯರು ಕೇಳುವ ಸಹನೆ ಕಳೆದುಕೊಂಡಿದ್ದಾರೆ. ಸಮಾಜ ಕೂಡ ಸಹನೆ ಕಳೆದುಕೊಂಡಿದ್ದರಿಂದ ವೈದ್ಯಕಿಯ ಕ್ಷೇತ್ರದಲ್ಲಿ ಪದೇ ಪದೇ ಸಮಸ್ಯೆಗಳು ಎದುರಾಗುತ್ತಿವೆ. ನಾಗರಿಕರು ಕೂಡ ವೈದ್ಯರೊಂದಿಗೆ ಸಹನೆಯಿಂದ ವರ್ತಿಸಬೇಕು ಎಂದರು.
ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ವೈದ್ಯರನ್ನು ಜನಸಾಮಾನ್ಯರೇ ಗೌರವಿಸುವ ಕೆಲಸ ಆಗಬೇಕಿದೆ. ಅಲ್ಲದೆ, ರಾಷ್ಟ್ರೀಯ ವೈದ್ಯರ ದಿನವನ್ನು ಸಾರ್ವಜನಿಕರೇ ಆಚರಿಸಿ ವೈದ್ಯರಿಗೆ ಗೌರವ ಸಲ್ಲಿಸುವ ಕೆಲಸ ಆಗಬೇಕು. ಆದರೆ, ಅಂತಹ ಕೆಲಸಗಳು ಸಮಾಜದಲ್ಲಿ ಆಗುತ್ತಿಲ್ಲ. ಇದರ ಬಗ್ಗೆ ಪ್ರತಿಯೊಬ್ಬ ವೈದ್ಯರು ಆತ್ಮಾವಲೋಕನ ಮಾಡಿಕೊಳ್ಳಬೇಕು. ವೈದ್ಯರು ತಮ್ಮ ಹಾಗೂ ಕುಟುಂಬದ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು. ಮಾಧ್ಯಮಗಳ ಕೂಡ ವೈದ್ಯರ ಬಗ್ಗೆ ಸಕಾರಾತ್ಮಕವಾಗಿ ಸುದ್ದಿಗಳನ್ನು ಬಿತ್ತರಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪ್ರಶಾಂತ ದೇಸಾಯಿ ಮಾತನಾಡಿ, ವೈದ್ಯಕಿಯ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಸವಾಲುಗಳು ಹೆಚ್ಚಾಗುತ್ತಿದ್ದು, ಅಷ್ಟೇ ಪ್ರಮಾಣದಲ್ಲಿ ರೋಗಿಗಳ ನಿರೀಕ್ಷೆಗಳು ಹೆಚ್ಚಾಗುತ್ತಿವೆ. ಹೀಗಾಗಿ ವೈದ್ಯರ ಮೇಲಿನ ಜವಾಬ್ದಾರಿ ಹೆಚ್ಚಿದೆ ಎಂದರು.ಆಸ್ಪತ್ರೆಯ ಚಿಕ್ಕ ಮಕ್ಕಳ ವಿಭಾಗದ ಮುಖ್ಯಸ್ಥ ಎಂ.ಕಡ್ಡಿ, ಸರ್ಜರಿ ವಿಭಾಗದ ಮುಖ್ಯಸ್ಥ ಡಾ.ಅಶೋಕ ಕುಲಗುಡ, ಮೆಡಿಶನ್ ವಿಭಾಗದ ಡಾ.ಸೌರಭ ಹಿರಮೇಠ, ವೈದ್ಯರು ಇತರರಿದ್ದರು.
ಇದೇ ಸಂದರ್ಭದಲ್ಲಿ ಕೆಎಲ್ಇ ಸಂಸ್ಥೆಯ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯ ಆವರಣದಲ್ಲಿ ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಜರುಗಿದ ಆರೋಗ್ಯ ತಪಾಸಣೆ ಶಿಬಿರದಲ್ಲಿ ತಜ್ಞ ವೈದ್ಯರು ಅಂದಾಜು 200ಕ್ಕೂ ಜನರು ಆರೋಗ್ಯ ತಪಾಸಣೆ ನಡೆಸಿದರು.