ಮಂಡ್ಯ: ಸಮಾಜದಲ್ಲಿ ವೈದ್ಯರು ದೇವರಿಗೆ ಸಮಾನರು. ತಾಯಿಗೆ ಜನ್ಮವನ್ನು ಕೊಟ್ಟರೆ ವೈದ್ಯರು ಮರುಜನ್ಮವನ್ನು ನೀಡುತ್ತಾರೆ ಎಂದು ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ.ಟಿ.ಎನ್.ಮರೀಗೌಡ ಹೇಳಿದರು.
ನಗರದ ಸುಮನ ವಿನಾಯಕ ನರ್ಸಿಂಗ್ ಹೋಂನ ಸಭಾಂಗಣದಲ್ಲಿ ಭಾರತೀಯ ವೈದ್ಯಕೀಯರ ಸಂಘ ಜಿಲ್ಲಾ ಶಾಖೆಯಿಂದ ಆಯೋಜಿಸಿದ್ದ ವೈದ್ಯರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವೈದ್ಯರೆಲ್ಲರನ್ನೂ ದೇವರು ಎಂದು ಜನರು ಕರೆಯುತ್ತಾರೆ. ವೈದ್ಯರು ದೇವರ ಪ್ರತಿನಿಧಿಯಂತೆ ಕೆಲಸ ಮಾಡುತ್ತಾರೆ. ಅನಾರೋಗ್ಯಕ್ಕೆ ಒಳಗಾದವರಿಗೆ ಸೂಕ್ತ ಚಿಕಿತ್ಸೆಯನ್ನು ನೀಡಿ ಗುಣಪಡಿಸುವ ಮಹತ್ತರವಾದ ಹೊರೆ ಹಾಗೂ ಜವಾಬ್ದಾರಿ ನಮ್ಮದಾಗಿದೆ ಎಂದರು.
ಭಯದ ವಾತಾವರಣ ಮತ್ತು ಹೃದಯಾಘಾತಕ್ಕೆ ಒಳಗಾದವರನ್ನು ವೈದ್ಯರು ಜೀವವನ್ನು ಉಳಿಸುವುದರ ಜತೆಗೆ ಅನಾರೋಗ್ಯಕ್ಕೆ ತುತ್ತಾದವರು ಜೀವವನ್ನು ಉಳಿಸಲು ಶ್ರಮಿಸುತ್ತಾರೆ. ವೈದ್ಯರು ಯಾವುದೇ ಬಗೆಯಲ್ಲಿಯೂ ತಪ್ಪುಗಳನ್ನು ಮಾಡದೆ ಇದ್ದರೂ ಸಹ ಕೆಲವೊಮ್ಮೆ ವಿನಾಕಾರಣ ಹಲ್ಲೆಯನ್ನು ಮಾಡುವಂತ ಪ್ರಕರಣ ನಡೆಯುತ್ತಿರುವುದು ವಿಷಾಧಕರ ಸಂಗತಿ. ಹೀಗಾಗಿ ನಾವು ಭಯದ ವಾತಾವರಣದಲ್ಲಿರುವಂತೆ ಮಾಡುವ ಉದಾಹರಣೆಗಳು ಬಹಳಷ್ಟಿವೆ ಎಂದರು.
ವೈದ್ಯರು ತುಂಬಾ ಒತ್ತಡದಿಂದ ಕೆಲಸವನ್ನು ನಿರ್ವಹಿಸುತ್ತಿದ್ದು, ಇದರಿಂದ ಸಾಮಾನ್ಯ ಮನುಷ್ಯರಿಗಿಂತ 5 ರಿಂದ 10 ವರ್ಷದವರೆಗೆ ಆಯಸ್ಸು ಕಡಿಮೆಯಾಗುತ್ತಿದೆ. ಮತ್ತೊಂದೆಡೆ ಹಲವಾರು ವೈದ್ಯರು ಮಾನಸಿಕ ಒತ್ತಡಕ್ಕೆ ಒಳಗಾಗಿ ಅಧಿಕ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆಯಿಂದ ಬಳಲುವಂತಾಗಿದೆ. ಜತೆಗೆ ವೈಯಕ್ತಿಕವಾದ ಬದುಕಿಗೆ ಸಮಯ ಇಲ್ಲದಂತಾಗಿದೆ. ಆದ್ದರಿಂದ ವಿವಿಧ ಬಗೆಯ ಕ್ರೀಡೆಗಳಲ್ಲಿ ಭಾಗವಹಿಸುವುದು, ಮನರಂಜನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು. ಸದಾ ಕಾಲವು ಸಹ ನಗುತ್ತಾ ಒಳ್ಳೆಯ ಸ್ನೇಹಿತರೊಂದಿಗೆ ಇರಬೇಕು. ವ್ಯಾಯಾಮ ಮತ್ತು ಯೋಗ, ನಿಗದಿತ ಸಮಯಕ್ಕೆ ಆಹಾರ ಸೇವನೆ ಮಾಡುವ ಹವ್ಯಾಸ ಬೆಳೆಸಿಕೊಂಡರೆ ನೆಮ್ಮದಿಯಾದ ಬದುಕು ನಡೆಸಲು ಸಾಧ್ಯ ಎಂದು ಸಲಹೆ ನೀಡಿದರು.
ನಿವೃತ್ತ ಶಸ್ತ್ರಚಿಕಿತ್ಸಕ ಡಾ.ವಿ.ಎಲ್.ನಂದೀಶ್, ಡಾ.ಪ್ರಸನ್ನಕುಮಾರ್, ಡಾ.ಜಗದೀಶ್‌ಕುಮಾರ್, ಡಾ.ಜಾಹ್ನವಿ, ಡಾ.ವಸುಮತಿ ರಾವ್, ಡಾ.ಟಿ.ಎಸ್.ಸತ್ಯನಾರಾಯಣರಾವ್, ಡಾ.ಪುಷ್ಪಾ ಇತರರಿದ್ದರು. ಇದೇ ಸಂದರ್ಭದಲ್ಲಿ ಡಾ.ಸುಮನಾ ಎಸ್.ರಾವ್, ಡಾ.ಸಿ.ಕೆ. ಉಮಾ, ಡಾ.ಬಿ.ಎಸ್.ಕಕ್ಕಿಲ್ಲಾಯ, ಡಾ.ಉಮೇಶ್, ಡಾ.ಸಿದ್ದಲಿಂಗಪ್ಪ ಹೂಗಾರ್, ಬಿ.ಕೆ.ನಿಶ್ಚಯ್, ಮಾಸ್ಟರ್ ಅಚ್ಯುತ್ ಅವರನ್ನು ಅಭಿನಂದಿಸಲಾಯಿತು.