ಮಂಡ್ಯ: ವೈದ್ಯರು ಮತ್ತು ರೋಗಿಯ ನಡುವೆ ತಾಯಿ ಮಗನಂತಹ ಸಂಬಂಧವಿರಬೇಕು ಎಂದು ಮೆಡಿಕಲ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಡಾ.ಬಿ.ಶಿವಕುಮಾರ್ ಲಕ್ಕೋಲ್ ಅಭಿಪ್ರಾಯಪಟ್ಟರು.
ನಗರದ ಚಂದ್ರದರ್ಶನ ಕಲ್ಯಾಣ ಮಂಟಪದಲ್ಲಿ ಮೆಡಿಕಲ್ ಅಸೋಸಿಯೇಷನ್ ಜಿಲ್ಲಾ ಶಾಖೆ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ವೈದ್ಯರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜು.1ರಂದು ಬಿ.ಸಿ.ರಾಯ್ ನೆನಪಿನ ಅಂಗವಾಗಿ ವೈದ್ಯರ ದಿನವನ್ನು ಆಚರಿಸುತ್ತೇವೆ. ವೈದ್ಯಕೀಯ, ಸಾರ್ವಜನಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸೇವೆ ಮಾಡಿದ ವೈದ್ಯರನ್ನು ಗುರುತಿಸಿ ಸನ್ಮಾನಿಸುತ್ತಿದ್ದೇವೆ. ಇದರಿಂದ ಯುವ ವೈದ್ಯರಿಗೆ ಸ್ಫೂರ್ತಿದಾಯಕವಾಗಬೇಕು ಎಂದು ಸಲಹೆ ನೀಡಿದರು.
ಬಿ.ಸಿ.ರಾಯ್ ಅವರು ಮಾಡಿರುವ ಕಾರ್ಯಗಳನ್ನು ಸ್ಮರಿಸಬೇಕು. ಇವರ ಹೆಸರಿನಲ್ಲಿ ಪ್ರಶಸ್ತಿ ಸ್ವೀಕರಿಸಿದ ವೈದ್ಯರು ಮತ್ತಷ್ಟು ಸಮಾಜ ಸೇವೆಯಲ್ಲಿ ತೊಡಗಿಕೊಳ್ಳುವುದು ಮುಖ್ಯವಾಗಬೇಕು. ಕೇವಲ ತೋರ್ಪಡಿಕೆಗೆ ಅಥವಾ ಬೇರೆ ಯಾವ ಉದ್ದೇಶಕ್ಕೂ ತಮ್ಮ ಸ್ವಾರ್ಥ ಸೇವೆಯಿಂದ ನೋಡುವುದನ್ನು ಬಿಡಬೇಕು ಎಂದರು.
ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಡಾ.ಟಿ.ಎನ್.ಮರೀಗೌಡ ಮಾತನಾಡಿ, ರೋಗಿಯು ವೈದ್ಯರನ್ನೇ ದೇವರೆಂದು ಭಾವಿಸುತ್ತಾರೆ. ತಾಯಿ ಮಗುವಿಗೆ ಜನ್ಮಕೊಟ್ಟರೆ, ರೋಗಿಗೆ ವೈದ್ಯರು ಮರುಜನ್ಮ ನೀಡುತ್ತಾರೆ. ವೈದ್ಯರು ಸಹ ಸದಾ ರೋಗಿಗಳನ್ನು ಗುಣಪಡಿಸುವ ಸಂಜೀವಿನಿಯಿದ್ದಂತೆ. ಕೋವಿಡ್ ಸಂದರ್ಭದಲ್ಲಿಯೂ ವೈದ್ಯರು ಜೀವದ ಹಂಗು ತೊರೆದು ಕೆಲಸ ಮಾಡಿರುವುದು ಶ್ಲಾಘನೀಯ ಎಂದರು.
ಅಸೋಸಿಯೇಷನ್‌ನ ಡಾ.ಎಸ್.ಶ್ರೀನಿವಾಸ್, ಡಾ.ವಿ.ಎಲ್.ನಂದೀಶ್, ಡಾ.ಬಿ.ಎಸ್.ಕಕ್ಕಿಲಾಯ, ಡಾ.ಎಂ.ಎಸ್.ಸಿದ್ದೇಗೌಡ, ಡಾ.ವಿನಯ್, ಡಾ.ಜಾಹ್ನವಿ, ಡಾ.ಜಗದೀಶ್ ಇತರರಿದ್ದರು. ಇದೇ ವೇಳೆ ಡಾ.ಬಿ.ಡಿ.ಕೃಷ್ಣಪ್ಪ, ಡಾ.ಶ್ರೀಧರ್‌ಮೂರ್ತಿ, ಡಾ.ಸಿ.ಲಿಂಗಯ್ಯ, ಡಾ.ಭವಾನಿಶಂಕರ್, ಡಾ.ಸುಧಾ ಸತ್ಯನಾಥ್ ಅವರನ್ನು ಗೌರವಿಸಲಾಯಿತು.