ಮಂಡ್ಯ: ಇತ್ತೀಚಿನ ದಿನಗಳಲ್ಲಿನ ವಿದ್ಯಾರ್ಥಿಗಳು ಆರೋಗ್ಯಕಡೆ ಗಮನ ನೀಡದೆ ಅನಾರೋಗ್ಯ ತರಲುವ ಫಾಸ್ಟ್‌ಫುಡ್ ಸೇವನೆ ಕಡೆ ಒಲವು ತೋರಿಸುತ್ತಿದ್ದಾರೆ ಎಂದು ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಡಾ.ಶಿಲ್ಪಶ್ರೀ ಹೇಳಿದರು.
ಇಲ್ಲಿನ ನೆಹರುನಗರದ ಡ್ಯಾಪೋಡೀಲ್ಸ್ ಶಾಲೆಯಲ್ಲಿ ವಿಎಲ್‌ಎನ್ ಎಜುಕೇಷನ್ ಟ್ರಸ್ಟ್ ವತಿಯಿಂದ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆ ಮತ್ತು ವೈದ್ಯರಿಗೆ ಅಭಿನಂದನೆ ಹಾಗೂ ವಿದ್ಯಾರ್ಥಿಗಳಿಂದ ವೈದ್ಯಕೀಯ ಕಿರುನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಮನೆಗಳಲ್ಲಿ ತಯಾರಿಸುವ ಮುದ್ದೆ, ಅನ್ನ, ಸೊಪ್ಪು, ಮೊಳಕೆಕಾಳು, ಮೊಟ್ಟೆ, ಹಾಲು, ಪೌಷ್ಠಿಕಾಹಾರ ಸೇವನೆ ಮಾಡುವುದು ಉತ್ತಮ. ಬೆಳವಣಿಗೆಯ ಹಂತದಲ್ಲಿ ಇರುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅತ್ಯಗತ್ಯ ಎಂದು ಸಲಹೆ ನೀಡಿದರು.
ಪ್ರೌಢವ್ಯವಸ್ಥೆಯಲ್ಲಿರುವ ವಿದ್ಯಾರ್ಥಿಗಳು ಮುಖದಲ್ಲಿ ಮೊಡುವೆ ಬರುವುದು ಸಾಮಾನ್ಯ. ಸ್ವಚ್ಛತೆಗೆ ಹೆಚ್ಚು ಮಹತ್ವ ನೀಡಬೇಕು. ಪಾಲಕರು ಮತ್ತು ಶಿಕ್ಷಕರು, ವೈದ್ಯರು ಹೇಳುವ ಆಹಾರ ಪದಾರ್ಥಗಳನ್ನು ಸೇವಿಸುವುದು ಆರೋಗ್ಯಕ್ಕೆ ಹಿತ, ಬೌದ್ಧಿಕ ಬೆಳೆವಣಿಗೆಗೆ ಸಹಕಾರಿಯಾಗುತ್ತದೆ ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ ಶಾಲೆಯ ಕಾರ್ಯದರ್ಶಿ ಸುಜಾತಾಕೃಷ್ಣ ಮಾತನಾಡಿ, ಮನುಷ್ಯನಿಗೆ ಆರೋಗ್ಯವೇ ಭಾಗ್ಯ ಎಂಬುದು ಸಾರ್ವಕಾಲಿಕ ಮಾತು. ಇದು ಅಷ್ಟೇ ಸತ್ಯವೂ ಕೂಡ. ಆರೋಗ್ಯವನ್ನು ರಕ್ಷಿಸುವುದು, ಅನಾರೋಗ್ಯಕ್ಕೆ ಮದ್ದು ನೀಡಿ ಗುಣಪಡಿಸುವುದು ವೈದ್ಯರ ಸೇವಾ ಕಾರ್ಯವಾಗಿದೆ. ಜೀವ ಉಳಿಸುವ ವೈದ್ಯರನ್ನು ಸದಾ ಸ್ಮರಿಸುವ ಕಾರ್ಯ ಸಾಗಲಿದೆ ಎಂದು ನುಡಿದರು.
ವಿದ್ಯಾರ್ಥಿಗಳು ವೈದ್ಯರ ದಿನವನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಭಾರತದಲ್ಲಿ 1991ರಲ್ಲಿ ಮೊದಲ ಬಾರಿಗೆ ಆಚರಿಸಲಾಯಿತು. ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿ ಹಾಗೂ ಶ್ರೇಷ್ಟ ವೈದ್ಯ ಬಿದನ್ ಚಂದ್ರ ರಾಯ್ ನೀಡಿರುವ ಕೊಡುಗೆ ಪರಿಗಣಿಸಿ ಅವರ ಜ್ಞಾಪಕಾರ್ಥವಾಗಿ ಪ್ರತಿ ವರ್ಷ ಜು.1ರಂದು ರಾಷ್ಟ್ರೀಯ ವೈದ್ಯ ದಿನವಾಗಿ ಆಚರಿಸಲು ತೀರ್ಮಾನಿಸಲಾಯಿತು. ವೈದ್ಯರ ಮಹತ್ವದ ಬಗ್ಗೆ ವಿದ್ಯಾರ್ಥಿಗಳು ಮತ್ತು ಜನರಲ್ಲಿ ಅರಿವು ಮೂಡಿಸಲಾಗುತ್ತದೆ. ಅಲ್ಲದೇ ನಮ್ಮ ಜೀವನಕ್ಕೆ ವೈದ್ಯರು ನೀಡಿದ ಕೊಡುಗೆಯನ್ನು ಸ್ಮರಿಸಿ ಪ್ರಶಂಸಿಸಲಾಗುತ್ತದೆ. ಈ ವಿಶೇಷ ದಿನವನ್ನು ಜನರ ಸೇವೆಗಾಗಿ ಪ್ರಾಣವನ್ನೇ ಪಣಕ್ಕಿಟ್ಟಿರುವ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಸಮರ್ಪಿಸಲಾಗುತ್ತದೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ವೈದ್ಯರಾದ ಡಾ.ವೇಣುಗೋಪಾಲ್, ಡಾ.ರಶ್ಮಿ, ಡಾ.ಶಿಲ್ಪಶ್ರೀ ಅವರನ್ನು ಅಭಿನಂದಿಸಲಾಯಿತು. ಶಾಲೆಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು ವೈದ್ಯಕೀಯ ಸೇವೆ, ಅನಾರೋಗ್ಯಕ್ಕೆ ಕಾರಣ, ಆರೋಗ್ಯ ಮಾರ್ಗದರ್ಶನ ಕುರಿತು ಕಿರುನಾಟಕಗಳನ್ನು ಪ್ರದರ್ಶನ ನೀಡಿದರು. ಮುಖ್ಯಶಿಕ್ಷಕಿ ಚಿತ್ರಾ ಇತರರಿದ್ದರು.