ಜಿಲ್ಲೆ

ಉದ್ಯಮವಾಗಿ ಮಾರ್ಪಾಡಾದ ವೈದ್ಯಕೀಯ ಕ್ಷೇತ್ರ: ಖ್ಯಾತ ಮಕ್ಕಳ ತಜ್ಞ ಡಾ.ಜಗದೀಶ್‌ಕುಮಾರ್ ಬೇಸರ

ಕೆ.ಎನ್.ರಾಘವೇಂದ್ರ

ಮಂಡ್ಯ: ಪ್ರಸ್ತುತ ದಿನದಲ್ಲಿ ವೈದ್ಯಕೀಯ ಕ್ಷೇತ್ರ ಉದ್ಯಮವಾಗಿ ಮಾರ್ಪಟ್ಟಿರುವುದರಿಂದ ವೈದ್ಯರಿಗೆ ಸಿಗುವ ಗೌರವ ಕಡಿಮೆಯಾಗಿದೆ ಎಂದು ಖ್ಯಾತ ಮಕ್ಕಳ ತಜ್ಞ ಡಾ.ಜಗದೀಶ್‌ಕುಮಾರ್ ಅಭಿಪ್ರಾಯಪಟ್ಟರು.

ನಗರದ ಬಂದೀಗೌಡ ಬಡಾವಣೆಯ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಮಂಡ್ಯ ನಗರ ಕಸಾಪ ವತಿಯಿಂದ ಆಯೋಜಿಸಿದ್ದ ವೈದ್ಯರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಭಾರತೀಯ ವೈದ್ಯಕೀಯ ಸಂಘದ ಪ್ರಾರ್ಥನೆಯನ್ನು ಉಲ್ಲೇಖಿಸಿದ ಅವರು ಎಲ್ಲರೂ ಆರೋಗ್ಯವಂತರಾಗಿ ಸಂತೋಷದಿಂದ ಇರಲಿ. ನೋವು ದುಃಖಗಳಿಂದ ಮುಕ್ತವಾಗಿರಲಿ ಎಂಬ ಧ್ಯೇಯ ಇರಬೇಕಾಗುತ್ತದೆ. ವೈದ್ಯರ ವಿಷಯ ಬಂದಾಗ ’ವೈದ್ಯೋ ನಾರಾಯಣೋ ಹರಿಃ’ ಎಂಬ ಉಲ್ಲೇಖ ಬರುತ್ತದೆ. ಆದರೆ ಇಂದಿನ ಸಂದರ್ಭದಲ್ಲಿ ಆ ವಾಕ್ಯ ತನ್ನ ಮಾನ್ಯತೆಯನ್ನು ಕಳೆದುಕೊಂಡು ಬಹಳ ವರ್ಷಗಳಾಯಿತು. ಹಿಂದೆ ವೈದ್ಯರು ತಮ್ಮ ಕಸುಬಿನ ಮೂಲಕ ಸೇವೆ ಮಾಡುತ್ತಿದ್ದರು. ಈಗ ಕಾರ್ಪೋರೇಟ್ ಜಗತ್ತಾಗಿ ಮಾರ್ಪಟ್ಟ ನಂತರ ವೈದ್ಯರು ವೈದ್ಯರಾಗಿ ಉಳಿದಿಲ್ಲ. ಬಂಡವಾಳ ಹಾಕಿ ಅದನ್ನು ಹಿಂಪಡೆಯುವುದರ ಬಗ್ಗೆ ಚಿಂತೆ ಮಾಡುತ್ತಾರೆ ಎಂದರು.

ವೃತ್ತಿಯ ಘನತೆ ಉಳಿಸಲು ವೈದ್ಯರು ಈ ರಂಗಕ್ಕೆ ಬರಬೇಕು. ಅವರಲ್ಲಿ ಸೇವಾ ಮನೋಭಾವನೆ ಇರಬೇಕು. ಸಮಾಜ ಒಳ್ಳೆಯ ವೈದ್ಯರನ್ನು ಗುರುತಿಸಿ ಅವರ ಗುಣ ಮತ್ತು ವಿಚಾರಗಳನ್ನು ಸಮಾಜಕ್ಕೆ ತಿಳಿಸಬೇಕು. ಇಂದು ಖಾಸಗಿಯಾಗಿ ವೃತ್ತಿ ಮಾಡುವವರಿಗೆ ತೊಂದರೆ ಇದೆ. ನೂರಾರು ವೈದ್ಯರ ನಡುವೆ ಜನರಿಗೆ ಯಾವ ವೈದ್ಯರ ಬಳಿ ಹೋಗಬೇಕು ಎಂಬ ಗೊಂದಲ ಭಯ ಇದೆ. ವೈದ್ಯರು ಅಧ್ಯಯನಶೀಲರಾಗಿ ತಲೆಗೆ ಹೆಚ್ಚಿನ ಕೆಲಸ ಕೊಡಬೇಕು. ಎಲ್ಲದಕ್ಕೂ ತಪಾಸಣೆಯ ಮೊರೆ ಹೋಗಬಾರದು. ಒಳ್ಳೆಯ ಜ್ಞಾನ, ಧ್ಯೇಯ ಇಟ್ಟುಕೊಂಡು ಕೆಲಸ ಮಾಡಬೇಕು. ವೈದ್ಯಕೀಯ ವೃತ್ತಿ ಜೀವನದಲ್ಲಿ ನಾಲ್ಕು ಜನಕ್ಕೆ ಒಳ್ಳೆಯ ಕೆಲಸ ಮಾಡಿ ಸಹಾಯ ಮಾಡಬೇಕು. ಜನರು ಗುರುತಿಸುವಂತಾಗಬೇಕು. ಮೊದಲು ಉದ್ಯೋಗ, ರೋಗಿಗಳು ನಂತರ ಮನೆಮಠ ಸಂಸಾರ ಎಂಬ ಧ್ಯೇಯ ನನ್ನದಾಗಿದೆ ಎಂದರು.

ನಗರ ಕಸಾಪ ಅಧ್ಯಕ್ಷೆ ಸುಜಾತಾ ಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಪದಾಧಿಕಾರಿಗಳಾದ ಡಾ.ಕೃಷ್ಣೇಗೌಡ ಹುಸ್ಕೂರು, ಧನಂಜಯ ದರಸಗುಪ್ಪೆ, ಬಿ.ಎಂ.ಅಪ್ಪಾಜಪ್ಪ, ಬಿ.ಜಿ.ಉಮಾ, ಶೋಭಾ ಉಪಸ್ಥಿತರಿದ್ದರು. ಇದೇ ವೇಳೆ ಮಕ್ಕಳ ತಜ್ಞ ಡಾ.ಜಗದೀಶ್ ಕುಮಾರ್, ಮೈಸೂರು ಕೆ.ಆರ್.ಆಸ್ಪತ್ರೆ ಕೀಲು ಮತ್ತು ಮೂಳೆ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಎಂ.ಕೆ.ದೀಪಕ್, ಮೈಸೂರು ಚೆಲುವಾಂಬ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಪ್ರಾಧ್ಯಾಪಕಿ ಡಾ.ಎಚ್.ಎಸ್.ಕಾವ್ಯಶ್ರೀ ಅವರನ್ನು ಸನ್ಮಾನಿಸಲಾಯಿತು.