ಮಂಜೇಶ್ವರ: ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ವೈದ್ಯರು ಅಹರ್ನಿಶಿ ದುಡಿಯುತ್ತಿದ್ದಾರೆ. ಆರೋಗ್ಯ ಕ್ಷೇತ್ರಕ್ಕೆ ಅವರ ಕೊಡುಗೆ ಅನುಪಮವಾದುದು ಎಂದು ಮೀಂಜ ಗ್ರಾಪಂ ಅಧ್ಯಕ್ಷೆ ಸುಂದರಿ ಆರ್.ಶೆಟ್ಟಿ ಹೇಳಿದರು.
ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಆಯೋಜಿಸಲಾಗಿದ್ದ ವೈದ್ಯರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಮಂಜೇಶ್ವರ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ಪ್ರಭಾಕರ ರೈ ಅವರನ್ನು ಗೌರವಿಸಲಾಯಿತು. ಶಾಲಾ ಸಂಚಾಲಕ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕಿ ಮೃದುಲಾ ಕೆ.ಎಂ., ಪ್ರೌಢ-ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಅರವಿಂದಾಕ್ಷ ಭಂಡಾರಿ, ಪಿಟಿಎ ಅಧ್ಯಕ್ಷ ಇಬ್ರಾಹಿಂ ಹೊನ್ನಕಟ್ಟೆ, ಶಿಕ್ಷಕರಾದ ರವಿಲೋಚನಾ ಸಿ.ಎಚ್., ಮಂಜೇಶ್ವರ ಸರ್ಕಾರಿ ಆಸ್ಪತ್ರೆ ಆರೋಗ್ಯ ಮೇಲ್ವಿಚಾರಕ ದಿಲೀಪ್ ಶುಭಾಶಂಸನೆಗೈದರು. ಪ್ರಾಂಶುಪಾಲ ರಮೇಶ್ ಕೆ.ಎನ್. ಸ್ವಾಗತಿಸಿದರು. ರಾಷ್ಟ್ರೀಯ ಸೇವಾ ಯೋಜನೆ ಸಂಚಾಲಕ ರಾಜೇಂದ್ರನ್ ಕೆ.ಪಿ. ವಂದಿಸಿದರು. ಹರೀಶ ಜಿ. ನಿರೂಪಿಸಿದರು.