ಬೆಂಗಳೂರು: ವೈದ್ಯರನ್ನು ನಾರಾಯಣ ರೂಪದಂತೆಯೇ ಕಾಣಬೇಕು ಎಂಬ ಸಂಸ್ಕೃತ ಉಕ್ತಿಯ ಮಹತ್ವವನ್ನು ಕರೊನಾ ಮಹಾಮಾರಿಯ ಸಂದರ್ಭದಲ್ಲಿ ಬಿಡಿಸಿ ಹೇಳುವ ಅಗತ್ಯವಿಲ್ಲದಷ್ಟು ಸ್ಪಷ್ಟವಾಗಿದೆ. ಕಳೆದ ಐದಾರು ತಿಂಗಳಿಂದ ದೇಶದ ಹಾಗೂ ವಿಶ್ವದ ವೈದ್ಯರು ಮಾನವತೆಯ ಉಳಿವಿಗಾಗಿ ಹಗಲಿರುಳು ಪಡುತ್ತಿರುವ ಕಷ್ಟವನ್ನು ಕಂಡ ನಂತರ ವೈದ್ಯರ ವಿಶ್ವರೂಪ ದರ್ಶನವೇ ಆದಂತಾಗಿದೆ. ಇಂದಿನ ಪೀಳಿಗೆ ಕಂಡು ಕೇಳರಿಯದ ಸೋಂಕು ರೋಗವನ್ನು ಅನುಭವಿಸುತ್ತಿರುವ ನಡುವೆಯೇ ರಾಷ್ಟ್ರೀಯ ವೈದ್ಯರ ದಿನ-2020 ಆಗಮಿಸಿದೆ. ಪ್ರತಿ ವರ್ಷ ಜುಲೈ 1ರಂದು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಭಾರತದಲ್ಲಿ ಆಚರಣೆ ಮಾಡಲಾಗುತ್ತಿದೆ. ವೈದ್ಯ ಪರಂಪರೆ ಭಾರತಕ್ಕೆ ಹೊಸದೇನೂ ಅಲ್ಲ. ಹಾಗೆ ನೋಡಿದರೆ ವಿಶ್ವದ ಅತಿ ಪ್ರಾಚೀನ ವೈದ್ಯ ಪರಂಪರೆ ಭಾರತದಿಂದಲೇ ಶುಶ್ರುತರಂತಹ ವೈದ್ಯರಿಂದ ಕಾಣಸಿಗುತ್ತದೆ. ಆದರೆ, ರಾಷ್ಟ್ರೀಯ ವೈದ್ಯರ ದಿನವನ್ನು, ಜೀವನದ ಕೊನೆಯ ಉಸಿರಿನವರೆಗೂ ವೈದ್ಯ ವೃತ್ತಿಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಡಾ. ಬಿಧಾನ ಚಂದ್ರ ರಾಯ್ (ಬಿ.ಸಿ. ರಾಯ್) ಅವರ ಸ್ಮರಣಾರ್ಥವಾಗಿ ಆಚರಣೆ ಮಾಡಲಾಗುತ್ತದೆ.
ನಿರಂತರ ಸೇವೆ ಮುಂದುವರಿಕೆ
ಕರೊನಾ ಸೋಂಕು ದೇಶದಲ್ಲಿ ಕಾಣಿಸಿಕೊಂಡ ಆರಂಭದ ದಿನಗಳಲ್ಲಿ ಅದಕ್ಕೆ ಬೇಕಾದ ಸಂಪೂರ್ಣ ಸಿದ್ಧತೆ ಆಗಿರಲಿಲ್ಲ. ಸೋಂಕು ಈ ಪ್ರಮಾಣದಲ್ಲಿ ಹೆಚ್ಚುವ ಅಂದಾಜು ಇಲ್ಲದ್ದರಿಂದ ಸರ್ಕಾರಿ ವ್ಯವಸ್ಥೆಯ ಮೇಲೆ ಹೆಚ್ಚಿನ ಒತ್ತಡ ಉಂಟಾಯಿತು. ಪ್ರಮುಖವಾಗಿ ವೈದ್ಯರಿಗೆ ಕರೊನಾ ಸೋಂಕು ಹರಡದಂತೆ ತಡೆಯಲು ಪಿಪಿಪಿ ಸುರಕ್ಷತಾ ಕಿಟ್ಗಳ ಕೊರತೆ ಇತ್ತು. ಇದ್ದ ಪಿಪಿಇ ಕಿಟ್ಗಳಲ್ಲೂ ಅನೇಕ ಲೋಪದೋಷಗಳು ಕಾಣಿಸಿಕೊಂಡಿದ್ದವು. ಮೂರ್ನಾಲ್ಕು ಪದರದ ಪಿಪಿಇ ಕಿಟ್ ಧರಿಸಿದ್ದರಿಂದ ಉಸಿರಾಟದ ತೊಂದರೆ, ಶೌಚಕ್ಕೆ ತೆರಳದಂತಹ ಪರಿಸ್ಥಿತಿ. ಆದರೂ ವ್ಯವಸ್ಥೆಯನ್ನು ದೂರದೇ ವೈದ್ಯಕೀಯ ಸಿಬ್ಬಂದಿ ಸೇವೆಯನ್ನು ಮುಂದುವರಿಸಿದರು. ಈ ಸಮಯದಲ್ಲಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ ಪ್ಯಾಕೇಜ್ ಘೊಷಣೆ ಮಾಡಿತು. ಕರೊನಾ ಸೋಂಕಿಗೆ ಬಲಿಯಾಗುವ ವೈದ್ಯಕೀಯ ಸಿಬ್ಬಂದಿಗೆ 50 ಲಕ್ಷ ರೂ. ವಿಮೆ ಘೊಷಣೆ ಮಾಡಲಾಯಿತು. ದೇಶದಲ್ಲೆ ಪಿಪಿಇ ಕಿಟ್ ತಯಾರಿಕೆಗೆ ಒತ್ತು ನೀಡಿದ್ದರಿಂದ ಸಾಕಷ್ಟು ಸೌಲಭ್ಯಗಳು ದೊರಕಿದವು. ಆದರೂ ಕರೊನಾ ಮಹಾಮಾರಿಯಿಂದ ದೇಶಾದ್ಯಂತ 600 ವೈದ್ಯರು ಹಾಗೂ ಶುಶ್ರೂಷಕರಿಗೆ ಕರೊನಾ ಸೋಂಕು ತಗುಲಿದೆ. ಇಷ್ಟರ ನಂತರವೂ ವೈದ್ಯ ಸಿಬ್ಬಂದಿ ತಮ್ಮ ಕರ್ತವ್ಯ ಹಾಗೂ ಅವಿರತ ಸೇವೆಯನ್ನು ಮುಂದುವರಿಸಿದ್ದಾರೆ.
ಡಾ.ಬಿ.ಸಿ.ರಾಯ್ ಸ್ಮರಣೆ
ವೈದ್ಯಕೀಯ ಕ್ಷೇತ್ರಕ್ಕೆ ಡಾ.ಬಿ.ಸಿ.ರಾಯ್ ನೀಡಿದ ಕೊಡುಗೆಯ ಗೌರವಾರ್ಥವಾಗಿ 1991ರಿಂದ ಜುಲೈ1ನ್ನು ರಾಷ್ಟ್ರೀಯ ವೈದ್ಯರ ದಿನವಾಗಿ ಘೊಷಣೆ ಮಾಡ ಲಾಯಿತು. ಪ್ರತಿ ವರ್ಷ ವೈದ್ಯರ ದಿನ ಆಚರಣೆ ಮಾಡಲಾಗುತ್ತಿದೆ.