ಜಿಲ್ಲೆ

ವೈದ್ಯರೇ ಸಮನ್ವಯದಿಂದ ಕಾರ್ಯನಿರ್ವಹಿಸಿ

ಜಿ.ಹೆಚ್. ಧನ್ಯಕುಮಾರ್

ಕೊಪ್ಪ : ಆಸ್ಪತ್ರೆಯಲ್ಲಿ ವೈದ್ಯರು ಸಮನ್ವಯದಿಂದ ಕೆಲಸ ನಿರ್ವಹಿಸಬೇಕು. ವೈದ್ಯರ ನಡುವೆ ವೈಯುಕ್ತಿಕ ಕಾರಣದ ನಿರ್ಲಕ್ಷೃಗಳು ರೋಗಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಶಾಸಕ ಟಿ.ಡಿ ರಾಜೇಗೌಡ ಹೇಳಿದರು.
ಸಾರ್ವಜನಿಕ ಆಸ್ಪತ್ರೆಯಲ್ಲಿ ಮಂಗಳವಾರ ನಡೆದ ಆರೋಗ್ಯರಕ್ಷಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಆಸ್ಪತ್ರೆ ಆವರಣದಲ್ಲಿ ಸ್ವಚ್ಛತೆ ಕಾಪಾಡಬೇಕು, ಸಿಬ್ಬಂದಿ ಸಾರ್ವಜನಿಕರೊಂದಿಗೆ ಶಿಸ್ತಿನಿಂದ ಇರಬೇಕು. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವಾಗ ಎಚ್ಚರ ವಹಿಸಬೇಕು. ಇಲ್ಲಿನ ಆಡಳಿತಾಧಿಕಾರಿಗಳು ಆಸ್ಪತ್ರೆಯಲ್ಲಿ ಸಮಸ್ಯೆಗಳಿದ್ದರೆ ನನ್ನನ್ನು ಸಂಪರ್ಕಿಸಬೇಕು, ಆಸ್ಪತ್ರೆಯ ಅಭಿವೃದ್ಧಿಗೆ ಅನುದಾನ ನೀಡಲಾಗುವುದು ಎಂದು ಹೇಳಿದರು.
ಮುಖ್ಯ ಶುಶ್ರೂಷಕ ಗೋವಿಂದ್ ಮಾತನಾಡಿ, ರಾತ್ರಿ ವೇಳೆ ಮಹಿಳಾ ಸಿಬ್ಬಂದಿ ಹೆಚ್ಚಾಗಿ ಕಾರ್ಯ ನಿರ್ವಹಿಸುತ್ತಾರೆ. ಈ ವೇಳೆ ರೋಗಿ ಕಡೆಯವರು ಆಸ್ಪತ್ರೆ ಶೌಚಗೃಹದಲ್ಲಿ ಮದ್ಯಪಾನ ಮಾಡುತ್ತಾರೆ. ಸುಮಾರು 220 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಾರೆ. ಇವರಿಂದ ಸಮಸ್ಯೆಯಾಗುತ್ತದೆ ಎಂದು ಸಭೆ ಗಮನಕ್ಕೆ ತಂದರು. ಆಸ್ಪತ್ರೆಯಲ್ಲಿ ಮದ್ಯಪಾನ ಮಾಡುವ ವ್ಯಕ್ತಿಗಳಿಗೆ ದಂಡ ಹಾಕಲು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಶಾಸಕರು ತಿಳಿಸಿದರು.
ಎಕ್ಸ್ ರೇ ಯಂತ್ರ 25 ವರ್ಷ ಹಳೇಯದಾಗಿದ್ದು, ಅದನ್ನು ಬದಲಾಯಿಸ ಬೇಕು ಎಂದು ಸಭೆ ಗಮನಕ್ಕೆ ತಂದರು. ಹೊಸ ಎಕ್ಸ್ ರೇ ಯಂತ್ರ ಖರೀದಿ ಮಾಡಲು ಎಷ್ಟು ವೆಚ್ಚವಾಗಲಿದೆ ಎಂಬುದರ ಬಗ್ಗೆ ಮಾಹಿತಿ ತರಿಸಿಕೊಂಡು ಶೀಘ್ರದಲ್ಲಿ ಖರೀದಿಸುವ ಪ್ರಯತ್ನ ಮಾಡಲಾಗುತ್ತದೆ ಎಂದು ಶಾಸಕರು ತಿಳಿಸಿದರು.ಅಕ್ರಮ ಸಕ್ರಮ ಸಮಿತಿ ಸದಸ್ಯ ನುಗ್ಗಿ ಮಂಜುನಾಥ್ ಮಾತನಾಡಿ, ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಯಂತ್ರ ಇದ್ದರೂ ಇಲ್ಲಿನ ವೈದ್ಯರು ಬೇರೆ ಕಡೆಗೆ ಬರೆದುಕೊಡುತ್ತಿದ್ದಾರೆ ಎಂದು ಆರೋಪಿಸಿದರು. ತಾಲೂಕು ವೈದ್ಯಧಿಕಾ ಡಾ.ಮಹೇಂದ್ರ ಕಿರೀಟಿ ಪ್ರತಿಕ್ರಿಯಿಸಿ, ಯಂತ್ರ ನಿರ್ವಾಹಕರು ಇಲ್ಲದೆ ಸಮಸ್ಯೆಯಾತ್ತಿದೆ ಎಂದರು. ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸಂದೀಪ್ ಮಾತನಾಡಿ, ಆಸ್ಪತ್ರೆಯ 11ವೈದ್ಯರಲ್ಲಿ 6 ಮಂದಿ ಕರ್ತವ್ಯದಲ್ಲಿದ್ದಾರೆ. 8 ಮಂದಿ ಜೂನಿಯರ್ ಡಾಕ್ಟರ್ ಗಳನ್ನು ನಮ್ಮ ಆಸ್ಪತ್ರೆಗೆ ನಿಯೋಜಿಸಬೇಕಿದೆ. ಹೊಸದಾಗಿ ಬಂದಿರುವ ವೈದ್ಯರು ಹಿರಿಯ ವೈದ್ಯರಿಗಿಂತ ಹೆಚ್ಚು ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ಗ್ರೂಫ್ ಡಿ ಹುದ್ದೆ ಭರ್ತಿ ಮಾಡಬೇಕು ಎಂದು ಮನವಿ ಮಾಡಿದರು.
ತಾಲೂಕು ಕೆಡಿಪಿ ಸದಸ್ಯ ಬಿ.ಪಿ.ಚಿಂತನ್, ಅಶೋಕ್‌ನಾರ್ವೆ, ರಾಜಶಂಕರ್, ನಾರ್ವೆ ಸಾಧಿಕ್ ಇದ್ದರು.