ಮಂಡ್ಯ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ತುರ್ತು ಚಿಕಿತ್ಸಾ ವೈದ್ಯಾಧಿಕಾರಿಗಳ ಸಂಘದಿಂದ ಮಿಮ್ಸ್ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ರಾಜ್ಯ ಸರ್ಕಾರಿ ವೇತನ ಶ್ರೇಣಿಯಂತೆ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಬೋಧಕೇತರ ವೈದ್ಯಾಧಿಕಾರಿಗಳಿಗೆ (ಆರೋಗ್ಯ ಇಲಾಖೆ ಮಾದರಿಯಂತೆ) ಏಕರೂಪ ವೇತನ ಜಾರಿ ಮಾಡಬೇಕು. ಸಿಎಂಒ/ಐಸಿಎಒಗಳಿಗೆ ವಿಶೇಷ ಭತ್ಯೆ ತಡೆಹಿಡಿಯಲಾದ ಸರ್ಕಾರಿ ಆದೇಶ ರದ್ದು ಮಾಡಬೇಕು. ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಬೋಧಕೇತರ ವೃಂದಕ್ಕೆ ಒಳಪಡುವ ವೈದ್ಯಾಧಿಕಾರಿಗಳ ಹುದ್ದೆಗಳ ಪಟ್ಟಿ ಪ್ರಕಟಿಸಬೇಕು. ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಬೋಧಕೇತರ ವೈದ್ಯರಿಗೆ ಏಕರೂಪ ಸಿ ಅಂಡ್ ಆರ್ ವೃಂದ ನಿಯಮಾವಳಿಗಳನ್ನು ತುರ್ತಾಗಿ ಮಾಡಬೇಕು ಎಂದು ಆಗ್ರಹಿಸಿದರು.
ವೈದ್ಯಾಧಿಕಾರಿಗಳ ಸಂಘದ ಡಾ.ಯೋಗೇಂದ್ರಕುಮಾರ್, ಡಾ.ಅವಿನಾಶ್, ಮಾಜಿ ಎಂಎಲ್ಸಿ ಕೆ.ಟಿ. ಶ್ರೀಕಂಠೇಗೌಡ, ನಗರಸಭಾ ಸದಸ್ಯ ನಾಗೇಶ್, ಬಿಎಸ್ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಇತರರಿದ್ದರು.