ಜಿಲ್ಲೆ

ರಾಜಸ್ತಾನ ಸರಕಾರದ ಆದೇಶಕ್ಕೆ ವೈದ್ಯರ ವಿರೋಧ

reportermys

ಮಡಿಕೇರಿ:
ಖಾಸಗಿ ಆಸ್ಪತ್ರೆಗಳೂ ತುತು೯ ವೈದ್ಯಕೀಯ ಸೇವೆಯನ್ನು ಎಲ್ಲರಿಗೂ ಉಚಿತವಾಗಿ ನೀಡಬೇಕೆಂದು ರಾಜಸ್ತಾನ ಸಕಾ೯ರ ಹೊರಡಿಸಿರುವ ಆದೇಶ ಖಾಸಗಿ ಆಸ್ಪತ್ರೆಗಳ ಅಸ್ತಿತ್ವಕ್ಕೆ ಮಾರಕವಾಗಿದ್ದು ಈ ಕಾನೂನನ್ನು ಹಿಂಪಡೆಯುವಂತೆ ಭಾರತೀಯ ವೈದ್ಯಕೀಯ ಸಂಘದ ಕೊಡಗು ಘಟಕದ ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ರಾಜಸ್ತಾನ ಸಕಾ೯ರ ಇತ್ತೀಚೆಗೆ ಕಾನೂನು ಹೊರಡಿಸಿ ಖಾಸಗಿ ಆಸ್ಪತ್ರೆಗಳು ಕೂಡ ತುತು೯ ವೈದ್ಯಕೀಯ ಸೇವೆಯನ್ನು ಸಕಾ೯ರಿ ಆಸ್ಪತ್ರೆಗಳಂತೆ ಉಚಿತವಾಗಿ ರೋಗಿಗಳಿಗೆ ನೀಡಬೇಕೆಂದು ಸೂಚಿಸಿದೆ. ಇದರಿಂದ ಖಾಸಗಿ ಆಸ್ಪತ್ರೆಗಳ ಅಸ್ತಿತ್ವಕ್ಕೇ ಧಕ್ಕೆ ಬಂದಂತಾಗಿದೆ. ಯಾವುದೆಲ್ಲಾ ತುತು೯ ಆರೋಗ್ಯ ಸೇವೆಯಡಿ ಬರುತ್ತದೆ ಎಂಬ ಸ್ಪಷ್ಟತೆಯೂ ಇಲ್ಲವಾಗಿದೆ. ಹೀಗಿರುವಾಗ ಖಾಸಗಿ ಆಸ್ಪತ್ರೆಗಳ ಸ್ಥಾಪನೆಯ ಉದ್ದೇಶವೇ ಈ ಕಾಯಿದೆಯಿಂದ ವಿಫಲವಾಗಲಿದೆ. ರಾಜ್ಯ ಸಕಾ೯ರವೊಂದು ಈ ರೀತಿಯ ಕಾಯಿದೆ ಮೂಲಕ ಖಾಸಗಿ ಆಸ್ಪತ್ರೆಗಳ ಮೇಲೆ ಹಿಡಿತ ಸ್ಥಾಪಿಸಲು ಮುಂದಾಗಿರುವುದು ದುರದೃಷ್ಟಕರ. ಖಾಸಗಿ ಆಸ್ಪತ್ರೆಗಳ ಆರೋಗ್ಯಕರ ವ್ಯವಸ್ಥೆಯೇ ಇದರಿಂದ ಸಮಸ್ಯೆಗೊಳಪಡಲಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ಕೊಡಗು ಘಟಕದ ಪದಾಧಿಕಾರಿಗಳು ಮನವಿಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ಭಾರತೀಯ ವೈದ್ಯಕೀಯ ಸಂಘದ ಕೊಡಗು ಘಟಕದ ಅಧ್ಯಕ್ಷ ಡಾ.ಶ್ಯಾಮ್ ಅಪ್ಪಣ್ಣ, ಗೌರವ ಕಾಯ೯ದಶಿ೯ ಡಾ.ಸಿ.ಆರ್.ಪ್ರಶಾಂತ್, ಹಿರಿಯ ಸದಸ್ಯರಾದ ಡಾ.ಮೋಹನ್ ಅಪ್ಪಾಜಿ, ಡಾ.ಎಂ.ಎ.ದೇವಯ್ಯ ಮನವಿ ಸಲ್ಲಿಸಿದ ನಿಯೋಗದಲ್ಲಿದ್ದರು.

ರಾಜಸ್ತಾನ ಸಕಾ೯ರದ ಹೊಸ ಕಾಯಿದೆ ವಿರೋಧಿಸಿ ಖಾಸಗಿ ಆಸ್ಪತ್ರೆಗಳ ವೈದ್ಯರು ಕಪ್ಪು ಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆಯನ್ನೂ ನಡೆಸಿದರು.