ಜಿಲ್ಲೆ

ಡಾಕಿಂಗ್ ಸ್ಟೇಷನ್ ಸ್ಥಳಾಂತರ

Haveri - Desk - Ganapati Bhat

ಸಂತೋಷ ವೈದ್ಯ ಹುಬ್ಬಳ್ಳಿ

ನಗರದಲ್ಲಿ ಸೈಕಲ್ ರೈಡಿಂಗ್ ಉತ್ತೇಜಿಸಲು ಸ್ಮಾರ್ಟ್ ಸಿಟಿ ಯೋಜನೆಯಡಿ ಆರಂಭಿಸಲಾದ ಸವಾರಿ-ಪಬ್ಲಿಕ್ ಬೈಸಿಕಲ್ ಶೇರಿಂಗ್ ವ್ಯವಸ್ಥೆಗೆ ಸಾರ್ವಜನಿಕರಿಂದ ನಿರೀಕ್ಷಿತ ಸ್ಪಂದನೆ ವ್ಯಕ್ತವಾಗುತ್ತಿಲ್ಲ ಎಂಬುದು ಹು-ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್ ಕಂಪನಿಯ ಗ್ರಹಿಕೆಗೆ ಬಂದಂತಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಕಂಪನಿಯ ಅಧಿಕಾರಿಗಳು ಇದೀಗ ಡಾಕಿಂಗ್ ಸ್ಟೇಷನ್ (10 ಬೈಸಿಕಲ್​ಗಳನ್ನು ನಿಲ್ಲಿಸುವ ಸ್ಥಳ) ಸ್ಥಳಾಂತರಕ್ಕೆ ಮುಂದಾಗಿದ್ದಾರೆ.

ವಾರದ ಹಿಂದೆ ಬೈಲಪ್ಪನವರ ನಗರದ ಡಾಕಿಂಗ್ ಸ್ಟೇಷನ್ ಸ್ಥಳಾಂತರಿಸಲಾಗಿದ್ದು, ಅದನ್ನು ಸಿದ್ಧಾರೂಢ ಮಠದ ಬಳಿ ಸ್ಥಾಪಿಸುವ ಸಾಧ್ಯತೆಗಳಿವೆ. ಬೈಲಪ್ಪನವರ ನಗರದ ಡಾಕಿಂಗ್ ಸ್ಟೇಷನ್​ನಿಂದ ಸಾರ್ವಜನಿಕರು ಬೈಸಿಕಲ್​ಗಳನ್ನು ಬಳಸುವ ಪ್ರಮಾಣ ಕಡಿಮೆಯಾಗಿತ್ತು. ಈ ಹಿನ್ನೆಲೆಯಲ್ಲಿ ಬೈಸಿಕಲ್​ಗಳ ಜತೆ ಡಾಕಿಂಗ್ ಸ್ಟೇಷನ್ ಎತ್ತಂಗಡಿಯಾಗಿದೆ.

2022ರ ಸೆಪ್ಟೆಂಬರ್​ನಲ್ಲಿ ಹುಬ್ಬಳ್ಳಿಯಲ್ಲಿ ಮೊದಲ ಬಾರಿ ಆರಂಭಗೊಂಡ ಪಬ್ಲಿಕ್ ಬೈಸಿಕಲ್ ಶೇರಿಂಗ್ ವ್ಯವಸ್ಥೆಯಡಿ ಸ್ಥಳಾಂತರಗೊಂಡ ಮೊದಲ ಡಾಕಿಂಗ್ ಸ್ಟೇಷನ್ ಇದು. ಎಲ್ಲಿ ಅಗತ್ಯವಿದ್ದವೋ ಅಲ್ಲಿ ಡಾಕಿಂಗ್ ಸ್ಟೇಷನ್​ಗಳನ್ನು ಸ್ಥಾಪಿಸಿಲ್ಲ ಎಂಬುದು ಸಾರ್ವಜನಿಕರ ದೂರಾಗಿದೆ. ಹಳೇ ಹುಬ್ಬಳ್ಳಿ, ಸಿದ್ಧಾರೂಢ ಮಠ, ಹಳೇ ಬಸ್ ನಿಲ್ದಾಣ ಬಳಿ ಡಾಕಿಂಗ್ ಸ್ಟೇಷನ್ ಸ್ಥಾಪಿಸಬೇಕೆಂಬ ಬೇಡಿಕೆ ಇವೆ. ವಿದ್ಯುತ್ ಸಂಪರ್ಕ ವ್ಯವಸ್ಥೆಗೆ ಹತ್ತಿರವಾದ ಸೂಕ್ತ ಸ್ಥಳ ಲಭ್ಯವಿರುವೆಡೆ ಮಾತ್ರ ಡಾಕಿಂಗ್ ಸ್ಟೇಷನ್ ಸ್ಥಾಪಿಸಲು ಸಾಧ್ಯವಾಗುತ್ತದೆ ಎಂಬುದು ಹು-ಧಾ ಸ್ಮಾರ್ಟ್ ಸಿಟಿ ಕಂಪನಿಗಳ ವಾದವಾಗಿದೆ.

ಒಟ್ಟಾರೆ ಸಮಾಧಾನಕರವಾಗಿಲ್ಲ

ಹುಬ್ಬಳ್ಳಿಯ 34 ಸ್ಥಳಗಳಲ್ಲಿ ಡಾಕಿಂಗ್ ಸ್ಟೇಷನ್​ಗಳನ್ನು ಸ್ಥಾಪಿಸಲಾಗಿದೆ. ಅದರಲ್ಲಿ ಒಂದು ಈಗ ಅಸ್ತಿತ್ವದಲ್ಲಿಲ್ಲ. ಪ್ರತಿ ಸ್ಟೇಷನ್​ನಲ್ಲಿ 10ರಂತೆ ಒಟ್ಟಾರೆ 340 ಬೈಸಿಕಲ್​ಗಳು ಸಾರ್ವಜನಿಕ ಬಳಕೆಗೆ ಲಭ್ಯವಾಗುತ್ತವೆ. ಹಾಗೇ ನೋಡಿದರೆ, ಒಟ್ಟಾರೆ ಬೈಸಿಕಲ್ ಬಳಕೆ ಪ್ರಮಾಣ ಸಮಾಧಾನಕರವಾಗಿಲ್ಲ. ಒಟ್ಟು ಲಭ್ಯವಿರುವ 340 ಬೈಸಿಕಲ್​ಗಳಲ್ಲಿ ನಿತ್ಯ ಸರಾಸರಿ 60ರಿಂದ 90 ಬೈಸಿಕಲ್​ಗಳು ಬಳಕೆಯಾಗುತ್ತಿವೆ. ಬಳಕೆ ಪ್ರಮಾಣ ಶೇ. 20ರಿಂದ 30 ರಷ್ಟಿದೆ. ಇದರರ್ಥ ಸ್ಮಾರ್ಟ್ ಸಿಟಿಯ ಇನ್ನೊಂದು ಯೋಜನೆ ಜನ ವಿಶ್ವಾಸ ಕಳೆದುಕೊಂಡಂತಾಗಿದೆ.

ಬೆಳಗ್ಗೆ 6.30ರಿಂದ 10 ಗಂಟೆಯವರೆಗೆ ಹಾಗೂ ಸಂಜೆ 5ರಿಂದ 7 ಗಂಟೆಯವರೆಗಿನ ಅವಧಿಯಲ್ಲಿ ಮಾತ್ರ ಹೆಚ್ಚು ಬಳಕೆಯಾಗುತ್ತಿವೆ. ಅದು ಸಹ ಕಾಲೇಜ್, ಶಿಕ್ಷಣ ಸಂಸ್ಥೆಗಳು, ಕೈಗಾರಿಕಾ ವಸಾಹತು ಸ್ಥಳಗಳಲ್ಲಿ ಮಾತ್ರ. ಉಳಿದ ಅವಧಿ ಹಾಗೂ ಸ್ಥಳಗಳಲ್ಲಿ ಬಳಕೆ ಪ್ರಮಾಣ ತೀರ ಕಳಪೆಯಾಗಿದೆ.

8.5 ಕೋಟಿ ರೂ. ವೆಚ್ಚ

ಐದು ವರ್ಷಗಳ ನಿರ್ವಹಣೆಯೂ ಸೇರಿದಂತೆ 8.5 ಕೋಟಿ ರೂ. ವೆಚ್ಚದಲ್ಲಿ ಪಬ್ಲಿಕ್ ಬೈಸಿಕಲ್ ಶೇರಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಟ್ರಿನಿಟಿ ಟೆಕ್ನಾಲಜೀಸ್ ಆಂಡ್ ಸಾಫ್ಟವೇರ್ ಸಲ್ಯೂಷನ್ಸ್ ಪ್ರೖೆವೇಟ್ ಲಿಮಿಟೆಡ್ ಎಂಬ ಸಂಸ್ಥೆಯು ಇದರ ಕಾರ್ಯಾಚರಣೆ ಹಾಗೂ ನಿರ್ವಹಣೆಯ ಹೊಣೆ ಹೊತ್ತಿದೆ. ಸ್ಥಳಾಂತರ ಅಗತ್ಯ ಎದುರಾದಲ್ಲಿ ಇವರೇ ತಮ್ಮ ಖರ್ಚಿನಲ್ಲಿಯೇ ಮಾಡುತ್ತಾರೆ.

ಸೈಕಲ್ ಬಳಕೆ ಹೇಗೆ?

ಈ ಯೋಜನೆಯಡಿ ಬೈಸಿಕಲ್ ಬಳಕೆದಾರರು 300 ರೂ. ಪಾವತಿಸಿ ಸದಸ್ಯತ್ವ ಪಡೆಯಬೇಕಾಗುತ್ತದೆ. ಇದರಲ್ಲಿ ಸಂಸ್ಕರಣೆ ಶುಲ್ಕ ಹಾಗೂ ವಿಮೆ ಎಂದು 200 ರೂ. ಕಡಿತವಾಗಿ ಸದಸ್ಯರ ಖಾತೆಯಲ್ಲಿ 100 ರೂ. ಉಳಿಯುತ್ತದೆ. ಸದಸ್ಯರಿಗೆ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತದೆ. ಇದರಿಂದ ಡಾಕಿಂಗ್ ಸ್ಟೇಷನ್​ನಲ್ಲಿ ಬೈಸಿಕಲ್ ಅನ್​ಲಾಕ್ ಮಾಡಿ ಬಳಕೆ ಮಾಡಲು ಸಾಧ್ಯವಾಗುತ್ತದೆ. ಬೈಸಿಕಲ್ ಅನ್ನು ಪುನಃ ಡಾಕಿಂಗ್ ಸ್ಟೇಷನ್​ಗೆ ತಂದು ಲಾಕ್ ಮಾಡುವವರೆಗೆ ಪ್ರತಿ ಗಂಟೆಗೆ 5 ರೂ. ನಂತೆ ಖಾತೆಯಲ್ಲಿನ ಹಣ ಕಡಿತವಾಗುತ್ತದೆ. ಹಣ ಖಾಲಿ ಆದ ಮೇಲೆ ಕನಿಷ್ಠ 100 ರಿಂದ 2000 ರೂ. ವರೆಗೆ ರಿಚಾರ್ಜ್ ಮಾಡಲು ಅವಕಾಶವಿದೆ. ಒಮ್ಮೆ ರಿಚಾರ್ಜ್ ಮಾಡಿದರೆ 1 ವರ್ಷ ವ್ಯಾಲಿಡಿಟಿ ಇರುತ್ತದೆ.

ಬೈಲಪ್ಪನವರ ನಗರದ ಡಾಕಿಂಗ್ ಸ್ಟೇಷನ್ ತೆರವು ಮಾಡಿದ್ದೇವೆ. ಎಲ್ಲಿ ಸ್ಥಾಪನೆ ಮಾಡಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಸಿದ್ಧಾರೂಢ ಮಠದ ಬಳಿ ಸ್ಥಾಪನೆ ಮಾಡಬೇಕು ಎಂಬ ಬೇಡಿಕೆ ಇದೆ. ವಿದ್ಯುತ್ ಸಂಪರ್ಕ ವ್ಯವಸ್ಥೆಗೆ ಹತ್ತಿರವಾದ ಸೂಕ್ತ ಸ್ಥಳ ಲಭ್ಯವಿರುವೆಡೆ ಮಾತ್ರ ಡಾಕಿಂಗ್ ಸ್ಟೇಷನ್ ಸ್ಥಾಪಿಸಲು ಸಾಧ್ಯ. ಸೂಕ್ತ ಸ್ಥಳವನ್ನು ಹು-ಧಾ ಮಹಾನಗರ ಪಾಲಿಕೆ ಗುರುತಿಸಿ ಕೊಡಬೇಕಾಗುತ್ತದೆ. | ಚನ್ನಬಸವರಾಜು ಡಿ., ಡಿಜಿಎಂ ಹು-ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್