ಜಿಲ್ಲೆ

ಪತ್ನಿ, ಪ್ರಿಯಕರನ ಕೊಲೆ ಮಾಡಿ ಪೊಲೀಸರಿಗೆ ಶರಣಾದ ಪತಿ

ಕೆಲಸ ಮುಗಿಸಿ ಮನೆಗೆ ಬಂದಾಗ ಇಬ್ಬರ ರಾಸಲಿಲೆ ಕಂಡು ಕೊಚ್ಚಿ ಹಾಕಿದ ಗಂಡ

ವಿಜಯವಾಣಿ ಸುದ್ದಿಜಾಲ ಆಳಂದ (ಕಲಬುರಗಿ)

ಕೆಲಸದ ನಿಮಿತ್ತ ಬೇರೆ ಊರಿಗೆ ಹೋಗಿ ಮಾದನಹಿಪ್ಪರಗಾ ಗ್ರಾಮದಲ್ಲಿರುವ ಮನೆಗೆ ಮರಳಿದಾಗ ಪತ್ನಿಯೊಂದಿಗೆ ಬೇರೊಬ್ಬ ಇರುವುದನ್ನು ಕಂಡು ರೊಚ್ಚಿಗೆದ್ದ ಗಂಡ ಸ್ಥಳದಲ್ಲಿದ್ದ ಕೊಡಲಿಯಿಂದ ಕೊಚ್ಚಿ ಇಬ್ಬರ ಕೊಲೆಗೈದು ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.

ಸೃಷ್ಟಿ ಭಕರೆ (೨೨) ಹಾಗೂ ಖಾಜಪ್ಪ ನಿಂಬಾಳಕರ (ವಡ್ಡರ್)(೨೪) ಕೊಲೆಯಾದವರು. ಮೂರು ವರ್ಷ ಹಿಂದೆ ಶ್ರೀಮಂತ ಭಕರೆ ತನ್ನ ಅಕ್ಕನ ಮಗಳು ಸೃಷ್ಟಿ ಜತೆ ಮದುವೆಯಾಗಿ ಸಂಸಾರ ಸಾಗಿಸುತ್ತಿದ್ದ. ಆದರೆ ಸೃಷ್ಟಿ ಅದೇ ಗ್ರಾಮದ ಖಾಜಪ್ಪ ನಿಂಬಾಳಕರ ಎಂಬಾತನ ಪ್ರೀತಿಸಿ ಕದ್ದು ಮುಚ್ಚಿ ಮನೆಗೆ ಕರೆಸಿಕೊಳ್ಳುತ್ತಿದ್ದಳು ಎನ್ನಲಾಗಿದೆ. ಶ್ರೀಮಂತ ಬೇರೆ ಊರಿನಿಂದ ಕೆಲಸ ಮುಗಿಸಿ ಮನೆಗೆ ಬಂದಾಗ ಗುರುವಾರ ರಾತ್ರಿ ಇವರಿಬ್ಬರ ರಾಸಲೀಲೆ ಕಂಡು ಸ್ಥಳದಲ್ಲೇ ಕೊಚ್ಚಿ ಹಾಕಿದ್ದಾನೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು, ಹೆಚ್ಚುವರಿ ಎಸ್‌ಪಿ ಮಹೇಶ ಮೇಘಣ್ಣನವರ, ಡಿವೈಎಸ್‌ಪಿ ಗೋಪಿ ಆರ್., ಸಿಪಿಐ ಪ್ರಕಾಶ ಯಾತನೂರ, ಪಿಎಸ್‌ಐ ಸವಿತಾ ಕಲ್ಲೂರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಖಾಜಪ್ಪ ತಂದೆ ದುರ್ಗಪ್ಪ ನೀಡಿದ ದೂರಿನನ್ವಯ ಮಾದನಹಿಪ್ಪರಗಾ ಠಾಣೆಯಲ್ಲಿ ಶ್ರೀಮಂತ ಭಕರೆ ವಿರುದ್ಧ ಜಾತಿನಿಂದನೆ ಹಾಗೂ ಕೊಲೆ ದಾಖಲಾಗಿದೆ.