ಹಿರೇಕೆರೂರ: ಶಿಕ್ಷಕ ವೃತ್ತಿ ಪವಿತ್ರವಾದದ್ದು, ಅದಕ್ಕೆ ಯಾವುದೇ ಚ್ಯುತಿ ಬಾರದಂತೆ ಕರ್ತವ್ಯ ನಿರ್ವಹಿಸಬೇಕು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಸಾತೇನಹಳ್ಳಿ ಗ್ರಾಮದ ಕರಡೇರ ಪ್ರತಿಷ್ಠಾನದ ಹಾಗೂ ಕೆ.ಎನ್. ಗ್ರೂಪ್ ಬೆಂಗಳೂರು ವತಿಯಿಂದ ಭಾನುವಾರ ಏರ್ಪಡಿಸಿದ್ದ ಗುರುವಂದನೆ ಹಾಗೂ ವಿದ್ಯಾಭೂಷಣ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.
ಶಿಕ್ಷಕರು ಮಕ್ಕಳಲ್ಲಿರುವ ತಪ್ಪುಗಳನ್ನು ತಿದ್ದಿ ಅವರಿಗೆ ಒಳ್ಳೆಯ ಸಂಸ್ಕಾರ ಕಲಿಸಬೇಕು. ಈಶ್ವರಪ್ಪ ಕರಡೇರ ಪ್ರತಿಷ್ಠಾನ ಸಮಾಜ ಸೇವೆ ಮಾಡುತ್ತಿರುವುದು ಶ್ಲಾಘನೀಯ. ಮಾನವರಾದ ನಾವು ಕೈಲಾದಷ್ಟು ಸಮಾಜ ಸೇವೆ ಮಾಡಲು ಮುಂದಾಗಬೇಕು ಎಂದರು.
ಬ್ಯಾಡಗಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಹಾದೇವ ಕರಿಯಣ್ಣನವರ ಮಾತನಾಡಿ, ಅನೇಕ ಜನ ಶಿಕ್ಷಕರು ಯಾವುದೇ ರೀತಿಯ ಪ್ರಶಸ್ತಿ, ಸಮ್ಮಾನಗಳ ಆಸೆಪಡದೇ ಸೇವೆ ಸಲ್ಲಿಸುತ್ತಿದ್ದಾರೆ. ಅಂತಹ ಶಿಕ್ಷಕರನ್ನು ಗುರುತಿಸುವ ಕಾರ್ಯವನ್ನು ಕರಡೇರ ಪ್ರತಿಷ್ಠಾನ ಮಾಡುತ್ತಿದೆ ಎಂದರು.
ಸಾಹಿತಿ ಜೀವರಾಜ ಛತ್ರದ ಮಾತನಾಡಿದರು. ಶಿಕ್ಷಕ, ಕರಡೇರ ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಸುರೇಶ ಕರಡೇರ ಅವರು ತಮ್ಮ ಪ್ರತಿಷ್ಠಾನ ನಡೆದು ಬಂದ ದಾರಿ ಬಗ್ಗೆ ವಿವರಿಸಿದರು.
ಜಿಲ್ಲೆಯ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಶಿಕ್ಷಕರಾದ ಎನ್. ಸುರೇಶಕುಮಾರ, ಇಂದಿರಾ ಕಂಗೂರಿ, ಅಶ್ವಿನಿ ಬಿದರಿ, ಸಿ.ಬಿ. ಪಾಟೀಲ, ಬಸವರಾಜ ಕೊಳ್ಳಿ, ಎಸ್.ಎಫ್. ಜಂಗ್ಲೆಪ್ಪನವರ, ಮಂಜಪ್ಪ ಯಾಲಕ್ಕಿ, ಗುರುರಾಜ ಚಂದ್ರಕೇರ ಅವರಿಗೆ ವಿದ್ಯಾಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಂತರ ಶಾಸಕ ಯು.ಬಿ. ಬಣಕಾರ ಅವರನ್ನು ಸನ್ಮಾನಿಸಲಾಯಿತು.
ಸೋಮು ಕರಡೇರ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಚಾರ್ಯರಾದ ಎಂ.ಬಿ. ಕಾಗಿನೆಲ್ಲಿ, ಯು.ಬಿ. ಕೊನಪ್ಪನವರ, ನಿವೃತ್ತ ಮುಖ್ಯಶಿಕ್ಷಕರಾದ ಎಚ್.ವಿ. ಬೆಟ್ಟಳ್ಳೇರ, ಭೀಮನಗೌಡ ಪಾಟೀಲ, ಮುಖ್ಯಶಿಕ್ಷಕ ಎನ್. ಸುರೇಶಕುಮಾರ, ಸಿದ್ದರಾಮೇಶ್ವರ ಅಜಗೊಂಡ್ರ, ಜಗದೀಶ ಅಮ್ರಧ, ಮಮತಾ ಕರಡೇರ, ಕವನಾ ಕರಡೇರ, ಅಶೋಕ ಯಲಿವಾಳ, ಪ್ರಭು ಕರಡೇರ ಇದ್ದರು.