ವಿಜಯಪುರ: ಕಳೆದೊಂದು ವರ್ಷದಲ್ಲಿ ಜಿಲ್ಲೆಯಲ್ಲಾದ ಕಳ್ಳತನ ಪ್ರಕರಣಗಳನ್ನು ಭೇದಿಸಿ ಸಾರ್ವಜನಿಕರಿಗೆ ತಾವು ಕಳೆದುಕೊಂಡ ಬೆಲೆ ಬಾಳುವ ಸಾಮಗ್ರಿಗಳನ್ನು ಮರಳಿ ನೀಡಿದ ಎಸ್‌ಪಿ ಲಕ್ಷ್ಮಣ ನಿಂಬರಗಿ ನೇತೃತ್ವದ ಪೊಲೀಸ್ ತಂಡದ ಕಾರ್ಯವನ್ನು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಶ್ಲಾಘಿಸಿದ್ದಾರೆ.
ವಿಜಯಪುರ ಪೊಲೀಸರು 2024-25ನೇ ಸಾಲಿನಲ್ಲಿ 225 ಪ್ರಕರಣಗಳಲ್ಲಿ 345 ಜನರನ್ನು ದಸ್ತಗಿರಿ ಮಾಡಿ ಏಳು ಕೋಟಿ ರೂಪಾಯಿಗೂ ಅಧಿಕ ಬೆಲೆ ಬಾಳುವ ಸಾಮಗ್ರಿ ವಶಕ್ಕೆ ಪಡೆದಿದ್ದಾರೆ. ಚಿನ್ನ, ಬೆಳ್ಳಿ ಆಭರಣಗಳು, ದ್ವಿ ಚಕ್ರವಾಹನಗಳು, ಟಿಪ್ಪರ್, ಕಾರ್ ಮತ್ತಿತರ ಸಾಮಗ್ರಿ ವಶಕ್ಕೆ ಪಡೆಯಲಾಗಿದೆ. ಪೊಲೀಸರ ಚುರುಕಿನ ಕಾರ್ಯಾಚರಣೆ ಫಲವಾಗಿ ಪ್ರಮುಖ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದ್ದು, ವಶಕ್ಕೆ ಪಡೆದ ಸಾಮಗ್ರಿಗಳನ್ನು ಸಂಬಂಧಿಸಿದವರಿಗೆ ವಾಪಸ್ ಮಾಡಿದ್ದಾರೆ.
ಈ ಕುರಿತು ತಮ್ಮ ‘ಎಕ್ಸ್’ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಸುನೀಲಗೌಡರು ‘ವಿಜಯಪುರ ಜಿಲ್ಲೆ ಎಸ್‌ಪಿ ಲಕ್ಷ್ಮಣ ನಿಂಬರಗಿ ನೇತತ್ವದ ಪೊಲೀಸ್ ತಂಡದ ಕಾರ್ಯ ಶ್ಲಾಘನೀಯವಾಗಿದೆ. ರಾಜ್ಯದ ಸರಾಸರಿಗಿಂತ ವಿಜಯಪುರ ಪೊಲೀಸರು ದುಪ್ಪಟ್ಟು ಸಾಧನೆ ಮಾಡಿದ್ದಾರೆ. ರಾಜ್ಯದ ಸರಾಸರಿ ಶೇ.30 ರಷ್ಟಿದ್ದರೆ ವಿಜಯಪುರ ಪೊಲೀಸರ ಸಾಧನೆಯೇ ಶೇ.64ರಷ್ಟಿದೆ. ಹೀಗಾಗಿ ರಾಜ್ಯದ ಪೊಲೀಸರಿಗೆ ವಿಜಯಪುರ ಪೊಲೀಸರು ಮಾದರಿಯಾಗಿದ್ದಾರೆಂದು ಸುನೀಲಗೌಡರು ಹೆಮ್ಮೆ ವ್ಯಕ್ತಪಡಿಸಿದ್ದಾರೆ.