ವಿಜಯಪುರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಬಬಲೇಶ್ವರ ಮಂಡಲ ಅಧ್ಯಕ್ಷ ಸಂತೋಷ ಕುರದಡ್ಡಿ ಸುದ್ದಿಗೋಷ್ಠಿ ನಡೆಸಿದರು. ವಿಜುಗೌಡ ಪಾಟೀಲ, ವಿನಾಯಕ ಮಮದಾಪುರ ಮತ್ತಿತರರಿದ್ದಾರೆ.  
ಜಿಲ್ಲೆ

ಬಿಜೆಪಿ ಮುಖಂಡನಾಗಿ ಇಫ್ತಿಯಾರ್ ಕೂಟದಲ್ಲಿ ಭಾಗಿ, ವಿಡಿಯೋ ವೈರಲ್‌ಗೆ ವಿಜುಗೌಡ ಪಾಟೀಲ ಕೊಟ್ಟ ಉತ್ತರವೇನು ಗೊತ್ತಾ?

ವಿಜಯಪುರ: ಬಿಜೆಪಿ ರಾಷ್ಟ್ರೀಯವಾದಿ ಪಕ್ಷ; ಮುಸ್ಲಿಂ ವಿರೋಧಿಯಲ್ಲ. ಬಿಜೆಪಿಯ ರಾಷ್ಟ್ರೀಯವಾದವನ್ನು ಒಪ್ಪಿಕೊಂಡು ಬರುವವರಿಗೆ ಅಭ್ಯಂತರವೂ ಇಲ್ಲ ಎನ್ನುವ ಮೂಲಕ ವಿಜುಗೌಡ ಪಾಟೀಲ ತಮ್ಮ ವಿರುದ್ಧ ವೈರಲ್ ಆಗಿರುವ ವಿಡಿಯೋಗೆ ಸಂಬಂಧಿಸಿದಂತೆ ಎದುರಾಳಿಗಳಿಗೆ ಟಾಂಗ್ ನೀಡಿದರು.

ಮುಸ್ಲಿಂರ ಇಫ್ತಿಯಾರ ಕೂಟದಲ್ಲಿ ಭಾಗಿಯಾದ ತಮ್ಮ ವಿಡಿಯೋಗೆ ಸಂಬಂಧಿಸಿದಂತೆ ಸೋಮವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯ ರಾಷ್ಟ್ರೀಯವಾದವನ್ನು ಒಪ್ಪಿಕೊಳ್ಳುವವರು ಮುಸ್ಲಿಂರಷ್ಟೇ ಅಲ್ಲ ಬೇರೆ ಯಾರೇ ಆದರೂ ಸ್ವಾಗತ. ಬಿಜೆಪಿ ಹಿಂದುತ್ವದ ಪರ. ಹಾಗಂತ ಬೇರೆಯವರನ್ನು ಬೈಯ್ಯುವುದೇ ಹಿಂದುತ್ವವಲ್ಲ. ಇಡೀ ದಿನ ಮುಸ್ಲಿಂರಿಗೆ ಬೈಯ್ದು ರಾತ್ರಿ ಅವರದ್ದೇ ಮನೆಯಿಂದ ಡಬ್ಬಿ ತಂದು ಊಟ ಮಾಡುವ ಜಾಯಮಾನ ನನ್ನದಲ್ಲ ಎಂದು ಪರೋಕ್ಷವಾಗಿ ಎದುರಾಳಿಗಳಿಗೆ ಚಾಟಿ ಬೀಸಿದರು.

ಇಫ್ತಿಯಾರ್ ಕೂಟದಲ್ಲಿ ಭಾಗಿಯಾದ ವಿಡಿಯೋ ಕುರಿತು ಸಮರ್ಥನೆ ಮಾಡಿಕೊಂಡ ವಿಜುಗೌಡ, ನಮ್ಮ ಕುಟುಂಬ ಮುಸ್ಲಿಂ ವಿರೋಧಿಯಲ್ಲ. ಮುಸ್ಲಿಂರ ರಂಜಾನ್ ನಾವೂ ಆಚರಿಸುತ್ತೇವೆ. ನಮ್ಮ ಮನೆಯಲ್ಲಿ ರೋಜಾ ಹಿಡಿಯುತ್ತಾರೆ. ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಒಳಗೊಂದು-ಹೊರಗುಂದು ಮಾಡುವ ಜಾಯಮಾನ ನನ್ನದಲ್ಲ. ಎಲ್ಲೋ ಡಾಬಾದಲ್ಲಿ ಯಾರದ್ದೂ ಸಾರಾಯಿ ಕುಡಿದು ಅಮಲಿನಲ್ಲಿ ಪೋಸ್ಟ್ ಮಾಡುವ ಕಿಡಿಗೇಡಿಗಳಿಗೆಲ್ಲ ಉತ್ತರ ಕೊಡಲ್ಲ ಎಂದರು.

ಎಂ.ಬಿ. ಪಾಟೀಲರನ್ನು ಹೊಗಳಿದ ಕಾರಣಕ್ಕಾಗಿಯೇ ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಹೊರಹಾಕಲಾಗಿದೆ. ಯತ್ನಾಳ ಉಚ್ಚಾಟನೆ ಬಿಸಿ ಬಿಜೆಪಿಗೇನೂ ತಟ್ಟಲ್ಲ. ಜನಾಕ್ರೋಶ ರ‌್ಯಾಲಿ ಮೇಲೂ ಪರಿಣಾಮ ಬೀರಲ್ಲ. ಬಿಜೆಪಿ ಹಾಗೂ ಪಕ್ಷದ ಕಾರ್ಯಕರ್ತರು ಗಟ್ಟಿಯಾಗಿದ್ದಾರೆ ಎಂದು ಪ್ರತಿಕ್ರಿಯಿಸಿದರು.