ವಿಜಯಪುರ: ‘ನಾನೇ ಎಲ್ಲ; ನಾನಿಲ್ಲದೇ ಪಕ್ಷ ಇಲ್ಲ’ ಎಂದು ಡುಬ್ಬ ಚಪ್ಪರಿಸಿಕೊಂಡು ತಿರುಗುವವರಿಗೆ ಜನಾಕ್ರೋಶ ಯಾತ್ರೆ ಮಹತ್ವದ ಸಂದೇಶ ನೀಡಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ರಾಜ್ಯದಲ್ಲಿಯೇ ನಂ.1 ಸಮಾವೇಶ ಎಂದು ರಾಜ್ಯಾಧ್ಯಕ್ಷ ವಿಜಯೇಂದ್ರ ಅವರೇ ಬಣ್ಣಿಸಿದ್ದು, ಇದು ಕಾಂಗ್ರೆಸ್‌ಗೂ ಸೇರಿ ಜಿಲ್ಲಾದ್ಯಂತ ಎಲ್ಲರಿಗೂ ಮಹತ್ವದ ಸಂದೇಶ ರವಾನಿಸಿದೆ. ಪಕ್ಷದ ದೊಡ್ಡದೇ ವಿನಃ ವ್ಯಕ್ತಿಯಲ್ಲ ಎಂಬ ಸಂದೇಶ ಜನಾಕ್ರೋಶ ಯಾತ್ರೆಯಿಂದ ರವಾನೆಯಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಪ್ರತಿಕ್ರಿಯಿಸಿದರು.
ರಾಜಕಾರಣದಲ್ಲಿ ಬೈಯ್ಕಂಡು ಹೋದರೆ ಆಗುತ್ತದಾ? ಬೈಯ್ಯುವವರ ದೊಡ್ಡವರಲ್ಲ ಬೈಯಿಸಿಕೊಳ್ಳುವವನೇ ರಾಜಕಾರಣದಲ್ಲಿ ದೊಡ್ಡವನಾಗುತ್ತಾನೆ. ನನ್ನ ಹತ್ರ ರೊಕ್ಕ ಇದೆ, ಸಮಾಜ ಇದೆ, ಅಧಿಕಾರ ಇದೆ ಎಂದರೆ ಯಾರೂ ಕೇಳಲ್ಲ. ಎಲ್ಲ ಜನರನ್ನು ಕಟ್ಟಿಕೊಂಡು ಹೋದರೆ ಮಾತ್ರ ರಾಜಕಾರಣ ಆಗುತ್ತದೆ. ಒಗ್ಗಟ್ಟು ಮುರಿದು ಕಾಲು ಚಾಚಿ ಹೋದರೆ ಆಗಲ್ಲ. ಆ ಭ್ರಾಂತಿ ನಾವೆಲ್ಲ ಬಿಡಬೇಕು ಎಂದ ಜಿಗಜಿಣಗಿ ಅವರ ಹೇಳಿಕೆ ಪರೋಕ್ಷವಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳರಿಗೆ ಕಿವಿ ಮಾತು ಹೇಳಿದಂತಿತ್ತು.
ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ಜನಾಕ್ರೋಶ ಯಾತ್ರೆ ಅಭೂತ ಪೂರ್ವವಾಗಿತ್ತು. ನಿರೀಕ್ಷೆಗಿಂತ ಹೆಚ್ಚು ಜನ ಬಂದಿದ್ದರು. ಇದು ಪಕ್ಷದ ಒಗ್ಗಟ್ಟು ತೋರಿಸಿತು. ಕಾಂಗ್ರೆಸ್‌ಗೆ ಮಾತ್ರವಲ್ಲ ಸಮಾವೇಶಕ್ಕೆ ಜನವೇ ಬಂದಿಲ್ಲವೆಂದು ವಿಡಿಯೋ ಹರಿಬಿಟ್ಟವರಿಗೂ ಇದೊಂದು ಮಹತ್ವದ ಸಂದೇಶ ನೀಡಿದೆ. ಯಾತ್ರೆ ಅದ್ದೂರಿಯಾಗಿ ನಡೆದಿಲ್ಲ ಎನ್ನುವವರು ಸೇರಿದ ಜನಸಂಖ್ಯೆಯನ್ನು ಕಣ್ತುಂಬಿಕೊಂಡಿದ್ದರೆ ಚೆನ್ನಾಗಿತ್ತು. ಖುದ್ದು ರಾಜ್ಯಾಧ್ಯಕ್ಷರೇ ಹೇಳಿದ್ದು-ರಾಜ್ಯದಲ್ಲಿಯೇ ಇದೊಂದು ಅತ್ಯಂತ ದೊಡ್ಡ ಸಮಾವೇಶ ಎಂದಿದ್ದಾರೆ. ಹೀಗಾಗಿ ಎದುರಾಳಿಗಳಿಗೆ ಇದಕ್ಕಿಂತ ಹೆಚ್ಚೇನನ್ನೂ ಹೇಳಲಾಗಲ್ಲ ಎಂದರು.
ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ವಿಪ ಮಾಜಿ ಸದಸ್ಯ ಅರುಣ ಶಹಾಪುರ, ವಿಜುಗೌಡ ಪಾಟೀಲ, ಕಾಸುಗೌಡ ಪಾಟೀಲ, ಸಂಜೀವ ಐಹೊಳೆ, ಚಂದ್ರಶೇಖರ ಕವಟಗಿ, ಸಾಬು ಮಾಶ್ಯಾಳ ಮತ್ತಿತರರಿದ್ದರು.