ವಿಜಯಪುರ ನಗರದ ಖಾಸಗಿ ಹೊಟೇಲ್‌ನಲ್ಲಿ ಮುಸ್ಲಿಂ ಬಾಂಧವ್ಯ ವೇದಿಕೆ ಸಂಸ್ಥಾಪಕ ಮುಸ್ತಾಕ್ ಹೊನ್ನಾಬೈಲ್ ಸುದ್ದಿಗೋಷ್ಠಿ ನಡೆಸಿದರು. ಡಾ.ಜೆ.ಎಸ್. ಪಾಟೀಲ, ಅನಿಷ ಪಾಶ, ಜಾಕೀರ ಹುಸೇನ್, ಡಾ.ಮಹ್ಮದ್‌ಶಫಿ ಪಾಟೀಲ ಮತ್ತಿತರರಿದ್ದಾರೆ.  
ಜಿಲ್ಲೆ

ಮುಸ್ಲಿಂ ಬಾಂಧವ್ಯ ವೇದಿಕೆಯಿಂದ ಸೌಹಾರ್ದ ಕೂಟ, ಲಿಂಗಾಯತ ನಾಯಕರೊಂದಿಗೆ ಚರ್ಚೆ, ಮುಸ್ತಾಕ್ ಹೊನ್ನಾಬೈಲ್ ಹೇಳಿದ್ದೇನು ಗೊತ್ತಾ?

ವಿಜಯಪುರ: ಶರಣರು-ಸೂಫಿ ಸಂತರು ನೆಲೆಸಿದ ನೆಲದಲ್ಲಿ ಹೆಚ್ಚಾಗಿ ಕೇಳು ಬರುತ್ತಿರುವ ಕೋಮುವಾದ ತಡೆಯಲು ಮುಸ್ಲಿಂ ಬಾಂಧವ್ಯ ವೇದಿಕೆಯಿಂದ ಲಿಂಗಾಯತ ಸೇರಿದಂತೆ ವಿವಿಧ ಸಮುದಾಯಗಳೊಂದಿಗೆ ಸೌಹಾರ್ದ ಕೂಡ ಹಮ್ಮಿಕೊಳ್ಳುತ್ತಿರುವುದಾಗಿ ಮುಸ್ಲಿಂ ಬಾಂಧವ್ಯ ವೇದಿಕೆ ಸಂಸ್ಥಾಪಕ ಮುಸ್ತಾಕ್ ಹೊನ್ನಾಬೈಲ್ ತಿಳಿಸಿದರು.

ಜಗಜ್ಯೋತಿ ಬಸವೇಶ್ವರರ ಜನ್ಮ ಭೂಮಿ ವಿಜಯಪುರ. ಬಸವೇಶ್ವರರು ಕೇವಲ ಲಿಂಗಾಯತ ಜ್ಯೋತಿಯಲ್ಲ; ಅವರು ವಿಶ್ವ ಜ್ಯೋತಿ. ಅಂಥ ಮಹಾತ್ಮರ ನೆಲದಲ್ಲಿ ಜನಿಸಿ ಕೆಲವರು ಕೋಮುವಾದ ಹರಡುತ್ತಿದ್ದಾರೆ. ಮುಸ್ಲಿರು ಹಾಗೂ ಲಿಂಗಾಯತರು ಅತ್ಯಂತ ಅನ್ಯೋನ್ಯವಾಗಿ ಬದುಕಿದ್ದಾರೆ. ಅದಕ್ಕೆ ಹುಳಿ ಹಿಂಡುವ ಕೆಲಸ ಮಾಡಬಾರದೆಂಬುದಾಗಿಯೂ ಭಾವೈಕ್ಯತೆ, ಸಾಮರಸ್ಯದೊಂದಿಗೆ ಬದುಕುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಕಡೆಗೂ ಸೌಹಾರ್ದ ಕೂಡ ಏರ್ಪಡಿಸಲಾಗುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ರಾಜ್ಯದಲ್ಲಿ ಸುಮಾರು 10 ಜನ ಲಿಂಗಾಯತ ಸಮುದಾಯದ ನಾಯಕರು ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದಾರೆ. ಯಾವುದೇ ಸರ್ಕಾರ ಬಂದರೂ ಸಚಿವ ಸಂಪುಟದಲ್ಲಿ ಸಿಂಹಪಾಲು ಲಿಂಗಾಯತ ಸಮುದಾಯಕ್ಕೇ ದಕ್ಕುತ್ತದೆ. ಹೀಗೆ ಮುಖ್ಯಮಂತ್ರಿ ಪದವಿ ಮತ್ತು ಸಚಿವ ಸಂಪುಟದ ಸ್ಥಾನಗಳನ್ನು ಲಿಂಗಾಯತ ಸಮುದಾಯ ಪಡೆಯಲು, ನಿರಂತರವಾಗಿ ಮುಸ್ಲಿಂ ಸಮುದಾಯ ರಾಜಕೀಯ ಸಹಕಾರ ನೀಡುತ್ತಾ ಬಂದಿದೆ. ಆದರೆ ಮುಸ್ಲಿಮರು ಲಿಂಗಾಯತ ಸಮುದಾಯಕ್ಕೆ ನೀಡಿದಷ್ಟು ರಾಜಕೀಯ ಸಹಕಾರವನ್ನು ಲಿಂಗಾಯತ ಸಮುದಾಯ ಮುಸ್ಲಿಮರಿಗೆ ನೀಡದೇ ಇರುವುದನ್ನು ನಿರಂತರ ಕಾಣುತ್ತಿದ್ದೇವೆ ಎಂದು ಖೇದ ವ್ಯಕ್ತಪಡಿಸಿದರು.

ಮುಸ್ಲಿಂರನ್ನು ಧರ್ಮದ ಕಾರಣಕ್ಕೆ ವಿರೋಧಿಸುವ ಕೋಮುವಾದಿ ಪಕ್ಷವನ್ನು ಬೆಂಬಲಿಸುವ ಲಿಂಗಾಯತರನ್ನು ಹೊರತುಪಡಿಸಿ, ಉಳಿದೆಲ್ಲ ಪಕ್ಷಗಳ ಲಿಂಗಾಯತರಿಗೆ ಮುಸ್ಲಿಂರು ನಿರಂತರ ಮತದಾನ ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ. ಆದರೆ ಅದಕ್ಕೆ ಹೋಲಿಸಿದರೆ ಕನಿಷ್ಠ ಪ್ರಮಾಣದಲ್ಲಿಯೂ ಲಿಂಗಾಯತ ಸಮುದಾಯದವರು ಮುಸ್ಲಿಮರಿಗೆ ಮತದಾನ ಮಾಡದೇ ಇರುವುದು ಮತ್ತು ರಾಜಕೀಯ ಅವಕಾಶಗಳಿಗೆ ಸಹಕಾರ ನೀಡದೆ ಇರುವುದನ್ನು ಕಾಣುತ್ತಿದ್ದೇವೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಮುಸ್ಲಿಮರ ಪಾಲಿನ ಶೇ.4 ಮೀಸಲಾತಿ ರದ್ದುಗೊಳಿಸಿ ಅನ್ನದ ತುತ್ತು ಕಸಿದುಕೊಂಡದ್ದು ಕರ್ನಾಟಕ ಮಾತ್ರವಲ್ಲ, ಇಡೀ ದೇಶದ ರಾಜಕಾರಣದ ಅತ್ಯಂತ ವಿಲಕ್ಷಣ ಮತ್ತು ವಿಕೃತ ವಿದ್ಯಮಾನ ಎಂಬುದನ್ನು ಇತಿಹಾಸದ ಪುಟಗಳಿಂದ ಎಂದಿಗೂ ಅಳಿಸಲಾಗದು. ಹೀಗಾಗಿ ಉಭಯ ಸಮುದಾಯಗಳ ನಡುವೆ ಬಾಂಧವ್ಯ ಉತ್ತಮಗೊಳಿಸುವ ನಿಟ್ಟಿನಲ್ಲಿ ಸಮಾಜದ ಮುಖಂಡರು, ಚಿಂತಕರು ಹಾಗೂ ಧಾರ್ಮಿಕ ಗುರುಗಳನ್ನು ಭೇಟಿ ಮಾಡಲಾಗುತ್ತಿದೆ ಎಂದರು.

ಲಿಂಗಾಯತ ನಾಯಕರು, ಚಿಂತಕರಾದ ಡಾ.ಜೆ.ಎಸ್. ಪಾಟೀಲ ಮಾತನಾಡಿ, ಭಾರತ ಬಹುಸಂಸ್ಕೃತಿಯ ನೆಲ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಏಕಸಂಸ್ಕೃತಿ ಹೇರುವ ಹುನ್ನಾರ ನಡೆಸಿವೆ. ಮುಸ್ಲಿಂರ ಮೀಸಲಾತಿ ಕಸಿದು ಲಿಂಗಾಯತರಿಗೆ ನೀಡುವ ಹಿಂದಿನ ಸರ್ಕಾರದ ನಿರ್ಧಾರ ನ್ಯಾಯಾಲಯದ ಮೆಟ್ಟಿಲೇರಿದೆ. ಅದು ಅನುಷ್ಟಾನವೂ ಅಷ್ಟಕ್ಕಷ್ಟೆಯಾದ್ದರಿಂದ ಮುಸ್ಲಿಂರು ಆತಂಕ ಪಡುವ ಅಗತ್ಯವಿಲ್ಲವೆಂದರು.

ಮೀಸಲಾತಿ ಎಂಬುದು ಆರ್ಥಿಕತೆಯನ್ನಾಧರಿಸಿ ನೀಡಿರುವಂಥದ್ದಲ್ಲ; ಸಾಮಾಜಿಕ ಮತ್ತು ಸಾಂಸ್ಕೃತಿಕ ಆಧಾರದ ಮೇಲೆ. ಈ ಹಿಂದಿನ ಸರ್ಕಾರ ಅದನ್ನು ಆರ್ಥಿಕವಾಗಿ ಮೇಲ್ವರ್ಗದ ಬಡವರಿಗೆ ಶೇ.10ರಷ್ಟು ನೀಡಿತು. ಆದರೆ, ಸಾಮಾಜಿಕ ಮತ್ತು ಸಾಂಸ್ಕೃತಿಕ ಆಧಾರದ ಮೇಲೆ ನೀಡಲಾದ ಮೀಸಲಾತಿಯನ್ನು ಕಿತ್ತುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ನ್ಯಾಯವಾದಿ ಅನಿಷ ಪಾಶ, ಜಾಕೀರ ಹುಸೇನ್, ಡಾ.ಮಹ್ಮದ್‌ಶಫಿ ಪಾಟೀಲ, ರೇಖಾ ಪಾಟೀಲ, ಎಸ್.ಎಂ. ಪಾಟೀಲ ಗಣಿಹಾರ, ಎಸ್.ಎಸ್. ಹಿರೇಮಠ ಮತ್ತಿತರರಿದ್ದರು.