ವಿಜಯಪುರ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಎಸ್‌ಪಿ ಲಕ್ಷ್ಮಣ ನಿಂಬರಗಿ ಜಫ್ತು ಮಾಡಲಾದ ಚಿನ್ನಾಭರಣಗಳನ್ನು ವೀಕ್ಷಿಸಿದರು. ಎಎಸ್‌ಪಿ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ, ಡಿವೈಎಸ್‌ಪಿ ಬಸವರಾಜ ಯಲಿಗಾರ ಮತ್ತಿತರರಿದ್ದಾರೆ. 
ಜಿಲ್ಲೆ

ವಿಜಯಪುರ ಪೊಲೀಸರ ಸಾಧನೆ, 225 ಕಳ್ಳತನ ಪ್ರಕರಣಗಳ ಪತ್ತೆ, 345 ಆರೋಪಿಗಳ ಬಂಧನ, ವಶ ಪಡಿಸಿಕೊಂಡ ಮೊತ್ತ ಎಷ್ಟು ಗೊತ್ತಾ?

ವಿಜಯಪುರ: ಕಳೆದೊಂದು ವರ್ಷದಲ್ಲಿ ಜಿಲ್ಲೆಯಲ್ಲಾದ ಕಳ್ಳತನ ಪ್ರಕರಣಗಳನ್ನು ಭೇದಿಸಿರುವ ಪೊಲೀಸರು 225 ಪ್ರಕರಣಗಳಲ್ಲಿ 345 ಜನರನ್ನು ದಸ್ತಗಿರಿ ಮಾಡಿ ಏಳು ಕೋಟಿ ರೂಪಾಯಿಗೂ ಅಧಿಕ ಬೆಲೆ ಬಾಳುವ ಸಾಮಗ್ರಿ ವಶಕ್ಕೆ ಪಡೆದಿದ್ದಾರೆ.

ಚಿನ್ನ, ಬೆಳ್ಳಿ ಆಭರಣಗಳು, ದ್ವಿ ಚಕ್ರವಾಹನಗಳು, ಟಿಪ್ಪರ್, ಕಾರ್ ಮತ್ತಿತರ ಸಾಮಗ್ರಿ ವಶಕ್ಕೆ ಪಡೆಯಲಾಗಿದೆ. ಪೊಲೀಸರ ಚುರುಕಿನ ಕಾರ್ಯಾಚರಣೆ ಫಲವಾಗಿ ಪ್ರಮುಖ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದ್ದು, ವಶಕ್ಕೆ ಪಡೆದ ಸಾಮಗ್ರಿಗಳನ್ನು ಸಂಬಂಧಿಸಿದವರಿಗೆ ವಾಪಸ್ ಮಾಡುತ್ತಿರುವುದಾಗಿ ಎಸ್‌ಪಿ ಲಕ್ಷ್ಮಣ ನಿಂಬರಗಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಪ್ರಕರಣಗಳ ವಿವರ

ಬಂಗಾರ ಮತ್ತು ಬೆಳ್ಳಿ ಕಳ್ಳತನದ 97 ಪ್ರಕರಣಗಳಲ್ಲಿ 152 ಜನರನ್ನು ಬಂಧಿಸಿ 5145.02 ಗ್ರಾಂ ಬಂಗಾರದ ಆಭರಣಗಳು, 1723 ಗ್ರಾಂ ಬೆಳ್ಳಿ ಆಭರಣಗಳು ಸೇರಿ ಒಟ್ಟು 2,39,85,110ರೂ.ಮೌಲ್ಯದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ದ್ವಿ-ಚಕ್ರ ವಾಹನ ಕಳ್ಳತನದ 73 ಪ್ರಕರಣಳಲ್ಲಿ 102 ಜನರನ್ನು ಬಂಧಿಸಿ 1,06,72,000 ರೂ.ಮೌಲ್ಯದ 251 ವಿವಿಧ ಕಂಪನಿಯ ದ್ವಿ-ಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ನಾಲ್ಕು ಚಕ್ರದ ವಾಹನಗಳ ಕಳ್ಳತನದ 14 ಪ್ರಕರಣಗಳಲ್ಲಿ 19 ಜನರನ್ನು ಬಂಧಿಸಿ 1,32,41,000 ರೂ.ಮೌಲ್ಯದ 12 ವಿವಿಧ ಕಂಪನಿಯ ನಾಲ್ಕು ಚಕ್ರದ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಟಿಪ್ಪರ ಕಳ್ಳತನದ 1 ಪ್ರಕರಣದಲ್ಲಿ 5 ಆರೋಪಿಗಳನ್ನು ಬಂಧಿಸಿ 19,00,000 ರೂ.ಮೌಲ್ಯದ 2 ಟಿಪ್ಪರ್ ವಶಕ್ಕೆ ಪಡೆಯಲಾಗಿದೆ. ನಗದು ಕಳ್ಳತನದ 19 ಪ್ರಕರಣದಲ್ಲಿ 31 ಆರೋಪಿಗಳನ್ನು ವಶಕ್ಕೆ ಪಡೆದು 1,91,89,404ರೂಪಾಯಿ ವಶಕ್ಕೆ ಪಡೆಯಲಾಗಿದೆ. ಇತರೆ ಕಳ್ಳತನದ 21 ಪ್ರಕರಣಗಳಲ್ಲಿ 36 ಜನರನ್ನು ಬಂಧಿಸಿ 143 ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇದರ ಮೌಲ್ಯ 12,42,250ರೂ. ಆಗಿದ್ದು, ಹೀಗೆ ಒಟ್ಟು 7,02,29,764 ರೂ. ಮೌಲ್ಯದ ಸಾಮಗ್ರಿ ವಶಕ್ಕೆ ಪಡೆಯಲಾಗಿದೆ ಎಂದು ಎಸ್‌ಪಿ ನಿಂಬರಗಿ ತಿಳಿಸಿದರು.

ವಶಪಡಿಸಿಕೊಂಡು ವಸ್ತುಗಳಲ್ಲಿ ಶುಕ್ರವಾರ ಸಂಬಂಧಪಟ್ಟ ವಾರಸುದಾರರಿಗೆ 3,46,08,100 ರೂ. ಮೌಲ್ಯದ ವಸ್ತುಗಳನ್ನು ಹಿಂದಿರುಗಿಸಲಾಗಿದೆ. ಬಾಕಿ ಉಳಿದ 3,56,21,664ರೂ. ಮೌಲ್ಯದ ವಸ್ತುಗಳನ್ನು ನ್ಯಾಯಾಲಯದಿಂದ ಅನುಮತಿ ಪಡೆದು ವಾರಸುದಾರರಿಗೆ ನೀಡಲಾಗುವುದೆಂದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶಂಕರ ಮಾರಿಹಾಳ ಹಾಗೂ ರಾಮನಗೌಡ ಹಟ್ಟಿ, ಡಿವೈಎಸ್‌ಪಿ ಬಸವರಾಜ ಯಲಿಗಾರ, ಸುನೀಲ ಕಾಂಬಳೆ, ಟಿ.ಎಸ್. ಸುಲ್ಫಿ ಮತ್ತಿತರರಿದ್ದರು.