ವಿಜಯವಾಣಿ ಸುದ್ದಿಜಾಲ ಕೋಲಾರ/ಕ್ಯಾಲನೂರು
ನಿಮ್ಮಮನೆಗಳಲ್ಲಿ ಮಕ್ಕಳಿಗೆ ಇಂತಹ ಪದಾರ್ಥಗಳಲ್ಲಿನ ಊಟ ನೀಡುತ್ತೀರಾ ? ನಿಮಗೆ ಫ್ಯಾನ್, ಕೂಲರ್ ಎಲ್ಲವೂ ಸರಿಯಾಗಿ ಇರಬೇಕು. ಆದರೆ ಮಕ್ಕಳಿಗೆ ಬೇಡವಾ ? ಇದು ಶಾಸಕ ಕೊತ್ತೂರು ಮಂಜುನಾಥ್ ಅಮ್ಮನಲ್ಲೂರು ವಸತಿನಿಲಯದ ವಾರ್ಡನ್ನ್ನು ತರಾಟೆಗೆ ತೆಗೆದುಕೊಂಡ ಪರಿ.
ತಾಲೂಕಿನ ಅಮ್ಮನಲ್ಲೂರು ಮೆಟ್ರಿಕ್ ಪೂರ್ವ ಹಾಸ್ಟೆಲ್ನಲ್ಲಿ ಶುಕ್ರವಾರ ದೋಸೆ ಸೇವಿಸಿ 18 ಮಕ್ಕಳು ಅಸ್ವಸ್ಥರಾಗಿದ್ದ ಹಿನ್ನೆಲೆಯಲ್ಲಿ ಶಾಸಕರು ಹಾಗೂ ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ಶನಿವಾರ ವಸತಿನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಅಸ್ವಸ್ಥಗೊಂಡಿದ್ದ 18 ಮಕ್ಕಳ ಪೈಕಿ ಹಲವರು ಚೇತರಿಸಿಕೊಂಡು ಮನೆಗಳಿಗೆ ತೆರಳಿದ್ದು, ಐವರು ಮಾತ್ರ ಚಿಂತಾಮಣಿಯ ಆಸ್ಪತ್ರೆಯಲ್ಲಿ ಶನಿವಾರವೂ ಚಿಕಿತ್ಸೆ ಪಡೆಯುತ್ತಿದ್ದ ಹಿನ್ನೆಲೆಯಲ್ಲಿ ಚಿಂತಾಮಣಿ ಆಸ್ಪತ್ರೆಗೂ ತೆರಳಿ ಮಕ್ಕಳ ಆರೋಗ್ಯ ವಿಚಾರಿಸಿದರು. ಬಳಿಕ ಹಾಸ್ಟೆಲ್ಗೆ ಭೇಟಿ ನೀಡಿದ್ದರು.
ಈ ವೇಳೆ ಮಕ್ಕಳು, ಅಡುಗೆಯವರ ವಿರುದ್ಧ ಹಾಗೂ ಅವ್ಯವಸ್ಥೆಯ ಬಗ್ಗೆ ಶಾಸಕರ ಗಮನಕ್ಕೆ ತಂದರು. ಇದಕ್ಕೆ ಶಾಸಕರು, ತಪ್ಪಿಸ್ಥರ ವಿರುದ್ಧ ಕೂಡಲೇ ಕ್ರಮಕೈಗೊಳ್ಳುವಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಹಾಸ್ಟೆಲ್ ಆವರಣಕ್ಕೆ ಬರುತ್ತಿದ್ದಂತೆಯೇ ಸ್ವಚ್ಛತೆ ಗಮನಿಸಿದ ಕೊತ್ತೂರು ಮಂಜುನಾಥ್, ಇಷ್ಟು ಸ್ವಚ್ಛವಾಗಿ ಇಟ್ಟುಕೊಂಡಿದ್ದೀರಿ, ಇದು ಇವತ್ತು ಮಾಡಿರುವ ಕೆಲಸವಲ್ಲವೇ ಎಂದು ಪ್ರಶ್ನಿಸಿದರು. ಹಾಸ್ಟೆಲ್ನ ಅಡುಗೆಕೋಣೆಗೆ ತೆರಳಿ ನೀರು ಸೇವಿಸಿದರು. ಅದೂ ಸರಿಯಾಗಿ ಫಿಲ್ಟರ್ ಆಗಿರಲಿಲ್ಲ. ಬಳಿಕ ದಾಸ್ತಾನು ಕೊಠಡಿಗೆ ತೆರಳಿದಾಗ ವಿವಿಧ ಆಹಾರ ಪದಾರ್ಥಗಳಲ್ಲಿ ಹುಳ ಇದ್ದುದು ಕಂಡುಬಂತು. ಇದನ್ನು ಕಂಡು ಅಡುಗೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಹಾಸ್ಟೆಲ್ನಲ್ಲಿ ಇರುವುದು ಬಡವರ ಮಕ್ಕಳು. ನಿಮ್ಮ ಮನೆಗಳಲ್ಲಿ ಮಕ್ಕಳಿಗೆ ಇಂತಹ ಪದಾರ್ಥಗಳಲ್ಲಿನ ಊಟ ನೀಡುತ್ತೀರಾ ಎಂದು ಕಿಡಿಕಾರಿದರು. ಬಳಿಕ ವಾರ್ಡನ್ ಕಚೇರಿಗೆ ತೆರಳಿದಾಗ ಅಲ್ಲಿನ ಸ್ವಚ್ಛತೆ ಕಂಡು ನಿಮಗೆ ಫ್ಯಾನ್, ಕೂಲರ್ ಎಲ್ಲವೂ ಸರಿಯಾಗಿ ಇರಬೇಕು. ಆದರೆ ಮಕ್ಕಳಿಗೆ ಬೇಡವಾ? ಎಂದು ಪ್ರಶ್ನಿಸಿದರು.
ಸ್ಥಳದಲ್ಲಿದ್ದ ವಾರ್ಡನ್, ನಾನು ರಜೆಯ ಮೇಲೆ ಊರಿಗೆ ಹೋಗಿದ್ದೆ ಸರ್, ಅಡುಗೆ ಸಹಾಯಕರಿಗೆ ಜವಾಬ್ದಾರಿ ನೀಡಿದ್ದೆ ಎಂದು ಉತ್ತರಿಸಿದರು. ಆಗ ಗ್ರಾಮಸ್ಥರು ವಾರ್ಡನ್ ವರ್ತನೆ ಬಗ್ಗೆ ಶಾಸಕರ ಗಮನಕ್ಕೆ ತಂದರು.
ಮಕ್ಕಳಿಗೆ ಅನ್ಯಾಯ ಮಾಡಿದರೆ ಮಾರಣಾಂತಿಕ ಕಾಯಿಲೆ
ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಕೊತ್ತೂರು ಮಂಜುನಾಥ್, ಮಕ್ಕಳಿಗೆ ಅನ್ಯಾಯ ಮಾಡುವವರು ಯಾರೇ ಆಗಿದ್ದರೂ ಕುಷ್ಠರೋಗ, ಹೃದಯಾಘಾತ, ಬಿಪಿ, ಶುಗರ್, ಕ್ಯಾನ್ಸರ್, ಟಿಬಿ ಸೇರಿ ಎಲ್ಲ ರೋಗಗಳೂ ಬರುತ್ತವೆ ಎಂದು ಶಾಪ ಹಾಕಿದರು. ಘಟನೆಗೆ ಸಂಬಂಧಿಸಿದಂತೆ ಅಡುಗೆ ಸಹಾಯಕನ ಅಮಾನತಿಗೆ ಸೂಚಿಸಿದ್ದು, ಬೇರೆ ಕಡೆಗೆ ವರ್ಗಾಯಿಸುತ್ತೇವೆ. ಅಲ್ಲದೆ ಹಾಸ್ಟೆಲ್ನಲ್ಲಿ ಕೆಲ ಆಹಾರ ಪದಾರ್ಥಗಳಲ್ಲಿ ಹುಳ ಕಂಡುಬಂದಿದ್ದು, ಆಹಾರ ಸರಬರಾಜುದಾರರನ್ನು ಕೂಡಲೇ ಬದಲಾಯಿಸುತ್ತೇವೆ. ಇಲಾಖೆಯ ತಾಲೂಕು -ಜಿಲ್ಲಾ ಮಟ್ಟದ ಅಧಿಕಾರಿಗಳ ವಿರುದ್ಧ ಕ್ರಮಕ್ಕೂ ಸಚಿವರ ಗಮನಕ್ಕೆ ದಾಖಲೆ ಸಮೇತ ದೂರು ನೀಡುವುದಾಗಿ ಹೇಳಿದರು.
ಜಾಗರೂಕತೆಯಿಂದ ನೋಡಿಕೊಳ್ಳಿ
ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಸರ್ಕಾರವು ಬಡ ಮಕ್ಕಳ ಶಿಕ್ಷಣಕ್ಕೆ, ಹಾಸ್ಟೆಲ್ಗಳಿಗೆ ಅನುದಾನ, ಸೌಲಭ್ಯ ಕೊಡುತ್ತಿದ್ದರೂ ಮಕ್ಕಳ ಶೈಕ್ಷಣಿಕ ಬೆಳವಣಿಗೆ ಶ್ರಮಿಸಬೇಕಾದ ನೀವು ನಿರಂತರ ನಿಗಾ ಏಕೆ ವಹಿಸಲಿಲ್ಲ? ನಿರಂತರವಾಗಿ ಹಾಸ್ಟೆಲ್, ಶಾಲೆಗಳಿಗೆ ಭೇಟಿ ನೀಡಿದ್ದರೆ ಇಂತಹ ಘಟನೆಗಳು ನಡೆಯುತ್ತಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಡವರು, ದಲಿತರ ಮಕ್ಕಳನ್ನು ಜಾಗರೂಕತೆಯಿಂದ ನೋಡಿಕೊಳ್ಳುವುದಕ್ಕೆ ಆಗದಿದ್ದರೆ ನಿಮಗೆ ಅಧಿಕಾರಿಯಾಗಿರುವ ಅರ್ಹತೆ ಇರುವುದಿಲ್ಲ ಎಂದು ಕಿಡಿಕಾರಿದರು.ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚಂಜಿಮಲೆ ರಮೇಶ್, ಮುಖಂಡರಾದ ಮುರಳಿ, ಉರಟ ಅಗ್ರಹಾರ ಚೌಡರೆಡ್ಡಿ, ಜಾಗೃತಿ ಸಮಿತಿ ಸದಸ್ಯರಾದ ಸಿ.ಕೆ.ರವೀಂದ್ರನಾಥ್, ನಾಗೇಶ್ ಇದ್ದರು.
ಅಮಾನತಿಗೆ ಸೂಚನೆ
ಘಟನೆಯ ವಿಚಾರವಾಗಿ ಇಲ್ಲಿನ ವಾರ್ಡನ್ ಹಾಗೂ ಅಡುಗೆ ಸಹಾಯಕನನ್ನು ಅಮಾನತುಗೊಳಿಸಿ, ಬೇರೆ ಕಡೆಗೆ ವರ್ಗಾವಣೆ ಮಾಡಲು ನೀವು ಕ್ರಮಕೈಗೊಳ್ಳಿ. ನಿಮ್ಮ ವಿರುದ್ಧ ಕ್ರಮಕೈಗೊಳ್ಳಲು ಸಚಿವರು, ಸಿಎಂ ಬಳಿ ನಾನು ಚರ್ಚೆ ನಡೆಸುವುದಾಗಿ ಅಲ್ಲಿಯೇ ಇದ್ದ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸನ್ ಹಾಗೂ ತಾಲೂಕು ಸಹಾಯಕ ನಿರ್ದೇಶಕ ಚನ್ನಬಸಪ್ಪರಿಗೆ ಸೂಚಿಸಿದರು.