Do what the minister says  
ಜಿಲ್ಲೆ

ಸಚಿವರು ಕೊಟ್ಟ ಮಾತಿನಂತೆ ನಡೆದುಕೊಳ್ಳಿ

Vijayapura - Desk - Doddanagouda Gudihindin

ಮುಧೋಳ: ಕಾರ್ಖಾನೆಗಳಿಂದ ಬರಬೇಕಾಗಿದ್ದ ಬಾಕಿ ಡಿ.31 ರೊಳಗಾಗಿ ಕೊಡಿಸುವುದಾಗಿ ನೀಡಿದ್ದ ಭರವಸೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹಾಗೂ ಜಿಲ್ಲಾಧಿಕಾರಿಗಳು ಉಳಿಸಿಕೊಳ್ಳಿ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತ ಕಾಂಬಳೆ ಒತ್ತಾಯಿಸಿದರು.

ಇಲ್ಲಿನ ಕಾ.ನಿ.ಪ. ಸಂಘದ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಬಾಕಿ ಹಣವನ್ನು ಡಿಸೆಂಬರ್‌ನಲ್ಲಿ ಕೊಡಿಸುವ ಜವಾಬ್ದಾರಿಯನ್ನು ಜಿಲ್ಲಾಧಿಕಾರಿ ಮತ್ತು ಸಚಿವರು ತೆಗೆದುಕೊಂಡಿದ್ದರು. ಆದರೆ, ಜ.15ನೇ ತಾರೀಕು ಕಳೆದರೂ ರೈತರಿಗೆ ಸಂಪೂರ್ಣ ಬಾಕಿ ಹಣ ಪಾವತಿಯಾಗಿಲ್ಲ. ಆದ್ದರಿಂದ ಈ ಕೂಡಲೇ ಸಚಿವ ಆರ್.ಬಿ. ತಿಮ್ಮಾಪೂರ ಅವರು ರೈತರಿಗೆ ಕೊಟ್ಟ ಮಾತಿನಂತೆ ನಡೆಯಬೇಕೆಂದು ಆಗ್ರಹಿಸಿದರು.

ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ದುಂಡಪ್ಪ ಯರಗಟ್ಟಿ ಮಾತನಾಡಿ, ಈ ಕುರಿತು ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿದಾಗ, ಎಫ್‌ಆರ್‌ಪಿ ಪ್ರಕಾರ ಮಾತ್ರ ತಾವು ನಡೆದುಕೊಳ್ಳಲು ಸಾಧ್ಯವೆಂದು ತಿಳಿಸಿದ್ದಾರೆ. ಅಲ್ಲದೆ ಎಫ್‌ಆರ್‌ಪಿ ಕಾಯ್ದೆ ಪ್ರಕಾರ ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರಿಗೆ 14 ದಿನಗಳ ಒಳಗೆ ಬಿಲ್ ಪಾವತಿಸಬೇಕು. ತಪ್ಪಿದಲ್ಲಿ ಶೇ.18ರ ಬಡ್ಡಿ ಸಮೇತ ಬಿಲ್ ಪಾವತಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ ನೀಡುವುದಾಗಿ ಭರವಸೆ ನೀಡಿದ್ದರು. ಜಿಲ್ಲೆಯಲ್ಲಿ ಕಾರ್ಖಾನೆಗಳು ನವೆಂಬರ್ ಕೊನೆ ವಾರದಿಂದ ಇಲ್ಲಿವರೆಗೆ ರೈತರಿಗೆ ಯಾವುದೇ ಹಣ ಸಂದಾಯ ಮಾಡಿಲ್ಲ. ಎಲ್ಲದಕ್ಕೂ ಎಫ್‌ಆರ್‌ಪಿ ನೀತಿ ಪಾಠ ಮಾಡುವ ಜಿಲ್ಲಾಧಿಕಾರಿಗಳು, ಕಬ್ಬು ಕಳುಹಿಸಿದ ರೈತರಿಗೆ ಹಣ ಸಂದಾಯ ಮಾಡಿಸುವಲ್ಲಿ ಕ್ರಮ ಕೈಗೊಳ್ಳಲ್ಲಿ ಎಂದು ಆಗ್ರಸಿದರು.

ಸುಭಾಷ ಶಿರಬೂರ, ಮಹೇಶ ಪಾಟೀಲ ಇದ್ದರು.