ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ಪಾರಂಪರಿಕ ದಸರಾ ಆಚರಣೆಯಲ್ಲಿ ಯಾವುದೇ ಲೋಪ ಉಂಟಾಗದಂತೆ ಎಲ್ಲ ಇಲಾಖೆಗಳು ತಮಗೆ ವಹಿಸಿರುವ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕು ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದ ಪುರಸಭಾ ಕಾರ್ಯಾಲಯದ ಸಭಾಂಗಣದಲ್ಲಿ ಮಂಗಳವಾರ ಎಲ್ಲ ಇಲಾಖೆಗಳ ಅಧಿಕಾರಿ ಸಿಬ್ಬಂದಿಯೊಂದಿಗೆ ಮಂಗಳವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶ್ರೀರಂಗಪಟ್ಟಣ ದಸರಾ ಉತ್ಸವದಲ್ಲಿ ಈ ಭಾರಿ ವೈಭವ ಮೇಳೈಸಲು ಎಲ್ಲ ಇಲಾಖೆಗಳು ಹೆಚ್ಚು ಜವಾಬ್ದಾರಿ ನಿರ್ವಹಿಸುವ ಬೇಕಿದ್ದು, ತಮ್ಮ ಇಲಾಖೆ ಪ್ರತಿನಿಧಿಸುವ ಟ್ಯಾಬ್ಲೋಗಳನ್ನು ಮಾಹಿತಿಗಳ ಜತೆಗೆ ಆಕರ್ಷಣೀಯ ನಿರ್ಮಿಸಿ ಜಂಬೂ ಸವಾರಿಯೊಂದಿಗೆ ಸಾಗಬೇಕು. ನಮ್ಮ ದಸರಾ ದೇಸಿ ದಸರಾವಾಗಿ ಹೊರ ಹೊಮ್ಮುವ ಕಾರಣ ಶಿಕ್ಷಣ, ಕೃಷಿ, ಪಶುಸಂಗೋಪನ, ಮಹಿಳಾ ಮತ್ತು ಮಕ್ಕಳಾಭಿವೃದ್ಧಿ ಯುವಜನ ಕ್ರೀಡಾ ಹಾಗೂ ಸೆಸ್ಕ್ ಇಲಾಖೆಗಳು ಹೆಚ್ಚು ಮುಂಜಾಗ್ರತೆ ವಹಿಸಬೇಕು.
ಕುಸ್ತಿ ನಡೆಸುವ ಕುರಿತು ಪೂರ್ವಭಾವಿ ತಯಾರಿ ಕೈಗೊಳ್ಳಬೇಕು, ಕ್ರೀಡಾ ದಸರಾ, ಯೋಗ ದಸರಾ, ಮಕ್ಕಳ ದಸರಾ, ಮಹಿಳಾ ದಸರಾ ಬಗ್ಗೆ ನಿಯೋಜಿತ ಅಧಿಕಾರಿಗಳು ಪೂರ್ವ ಸಿದ್ಧತಾ ಕಾರ್ಯಕ್ರಮಗಳ ಪಟ್ಟಿ ರಚಿಸಬೇಕು. ರೈತರಿಗಾಗಿ ಕೃಷಿ, ಸಲಕರಣೆಗಳು, ಬೆಳೆಗಳು ಹಾಗೂ ರೋಗ ನಿರ್ವಹಣೆ ಕುರಿತ ಮಾಹಿತಿ, ಹಾಲು ಕರೆಯುವ ಸ್ಪರ್ಧೆ ಸೇರಿದಂತೆ ರಾಸುಗಳ ಪಾಲನೆ ಕುರಿತು ಜಾಗೃತಿ ಮೂಡಿಸುವ ಕೆಲಸವಾಗಬೇಕು. ಶ್ರೀರಂಗನಾಥಸ್ವಾಮಿ ಮೈದಾನದ ದಸರಾ ವೇದಿಕೆ ಬಳಿ ಅಂಗಡಿ ಮಳಿಗೆಗೆಳ ನಿರ್ಮಾಣ, ಪುಸ್ತಕ ಪ್ರದರ್ಶನ, ಆಹಾರ ಮೇಳ, ವಿದ್ಯುತ್ ದೀಪಾಲಂಕಾರ ಕುರಿತು ಸಿದ್ಧತೆ ಕೈಗೊಳ್ಳಬೇಕು. ಜಂಬೂ ಸವಾರಿಗೆ ಬರುವ ಆನೆಗಳ ನಿರ್ವಹಣೆ ಹಾಗೂ ಇರಿಸುವ ಸ್ಥಳಗಳ ಕುರಿತು ಅರಣ್ಯ ಇಲಾಖೆ ಹೆಚ್ಚು ಜಾಗೃತೆ ವಹಿಸಬೇಕು. ಮುಖ್ಯವಾಗಿ ಪುರಸಭೆ ಎಲ್ಲ ಸ್ಥಳಗಳಲ್ಲೂ ಶುಚಿತ್ವ ಸೇರಿದಂತೆ ಸಂಭ್ರಮಾಚರಣೆಗೆ ತಳಿರು ತೋರಣಗಳ ಅಲಂಕಾರ ನಿರ್ವಹಣೆಗೆ ಸೂಚಿಸಿ ಪೊಲೀಸ್ ಇಲಾಖೆ ಭದ್ರತೆಗೆ ಅವಶ್ಯವಿರುವ ಎಲ್ಲ ಕ್ರಮಗಳನ್ನು ಈಗಿನಿಂದಲೇ ಜಾರಿಗೊಳಿಸಲು ಮುಂದಾಗಬೇಕು ಎಂದು ತಾಕೀತು ಮಾಡಿದರು.
ಸೆ.25ರಂದು ಶ್ರೀರಂಗಪಟ್ಟಣದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್ ಸೇರಿದಂತೆ ಇತರ ಅಧಿಕಾರಿಗಳೊಂದಿಗೆ ದಸರಾ ಮಂಟಪ, ಜಂಬೂ ಸವಾರಿ ಸಾಗುವ ರಸ್ತೆ, ದಸರಾ ಕಾರ್ಯಕ್ರಮಗಳ ನಡೆಯುವ ಶ್ರೀರಂಗನಾಥಸ್ವಾಮಿ ಮೈದಾನದ ಪರಿಶೀಲನೆ ನಡೆಸಲಾಗುತ್ತಿದ್ದು, ಎಲ್ಲ ಅಧಿಕಾರಿ ಸಿಬ್ಬಂದಿ ಯಾವುದೇ ಸೂಚನೆಗಳನ್ನು ಪಾಲಿಸಲು ಸಿದ್ಧರಿರಬೇಕು ಎಂದು ತಿಳಿಸಿದರು.
ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೇಣು, ಪುರಸಭಾ ಮುಖ್ಯಾಧಿಕಾರಿ ಎಂ.ರಾಜಣ್ಣ, ದಸರಾ ಮಳಿಗೆಗಳ ನೋಡಲ್ ಅಧಿಕಾರಿ ಸಂಜೀವಪ್ಪ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.