ಜಿಲ್ಲೆ

ಸಮಾಜ ಗುರುತಿಸುವಂಥ ಕೆಲಸ ಮಾಡಿ

ಉತ್ತರ ಕನ್ನಡ ಡೆಸ್ಕ್

ಮುಂಡರಗಿ: ಜೀವನದಲ್ಲಿ ಕಷ್ಟಗಳು ಬರುತ್ತವೆ. ಅವುಗಳನ್ನು ಎದುರಿಸಿ ಮುನ್ನಡೆಯಬೇಕು. ಕಷ್ಟಗಳಿಗೆ ಸಾವು ಒಂದೇ ಪರಿಹಾರವಲ್ಲ. ಸಾವನ್ನು ಎದುರಿಸಿ ಜಯಿಸಬೇಕು. ಯಾರು-ಯಾರನ್ನೂ ಗುರುತಿಸುವುದಿಲ್ಲ. ಸಮಾಜ ನಮ್ಮನ್ನು ಗುರುತಿಸುವಂಥ ಕೆಲಸ ಮಾಡಬೇಕು ಎಂದು ಪದ್ಮಶ್ರೀ ಡಾ. ಮಂಜಮ್ಮ ಜೋಗತಿ ಹೇಳಿದರು.

ಪಟ್ಟಣದ ಕೆ.ಆರ್. ಬೆಲ್ಲದ ಮಹಾವಿದ್ಯಾಲಯದ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಂಗಳಮುಖಿಯರ ಬದುಕಿನ ತಲ್ಲಣಗಳು ಕುರಿತು ಒಂದು ದಿನದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ತಂದೆ- ತಾಯಿ, ಗುರುಗಳನ್ನು ಪ್ರೀತಿ, ವಿಶ್ವಾಸ ಹಾಗೂ ಗೌರವದಿಂದ ಕಾಣಬೇಕು. ಭಕ್ತಿ, ಶ್ರದ್ಧೆ ಜತೆಗೆ ಸಮಯಕ್ಕೆ ಗೌರವ ಕೊಟ್ಟರೆ ನಮಗೂ ಗೌರವ ಬರುತ್ತದೆ. ನಂಬಿಕೆಯಿಂದ ಕರ್ತವ್ಯ ನಿರ್ವಹಿಸಬೇಕು. ನಾವು ಜೀವನದಲ್ಲಿ ನಡೆದು ಬಂದ ದಾರಿಯನ್ನು ಮರೆಯಬಾರದು. ಮಠ- ಮಾನ್ಯಗಳಿಂದ ಸಂಸ್ಕಾರ ದೊರೆಯುತ್ತದೆ. ವಿದ್ಯಾರ್ಥಿಗಳು ಸುಸಂಸ್ಕೃತರಾಗಿ ಬಾಳಬೇಕು. 1ರಿಂದ 10ನೇ ತರಗತಿವರೆಗೂ ಕನ್ನಡ ಸರ್ಕಾರಿ ಶಾಲೆಯಲ್ಲೇ ಮಕ್ಕಳಿಗೆ ಅಭ್ಯಾಸ ಮಾಡಿಸಬೇಕು. ಬದುಕು ಕಟ್ಟಿಕೊಳ್ಳಲು ಆಂಗ್ಲ ಭಾಷೆಯೂ ಸಹಕಾರಿ. ಆಂಗ್ಲ ಭಾಷೆ ಕಲಿಕೆ ಜತೆಗೆ ಕನ್ನಡ ಭಾಷೆ ಉಳಿಸಿ- ಬೆಳೆಸಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ನಾಡೋಜ ಡಾ .ಅನ್ನದಾನೀಶ್ವರ ಸ್ವಾಮೀಜಿ ಮಾತನಾಡಿ, ಮಂಗಳಮುಖಿ ಪದ ಈಗ ಬಂದಿದ್ದು, ಮೊದಲು ಈ ಭಾಗದಲ್ಲಿ ಜೋಗತಿ ಎನ್ನುವ ಹೆಸರಿತ್ತು. ಮನುಷ್ಯನಲ್ಲಿ ಸಹಜವಾಗಿ ಬದಲಾವಣೆ ಆಗಿರುತ್ತದೆ. ಸಾರ್ಥಕ ಜೀವನ ರೂಪಿಸಿಕೊಳ್ಳಲು ಪ್ರಯತ್ನಿಸಿ ಸಾಧಕನಾಗಬೇಕು ಎಂದರು.

ಬಿ.ಎನ್. ಹೊರಪೇಟೆ ಮಾತನಾಡಿ, ದೇಶದಲ್ಲಿ 50 ಲಕ್ಷ ಮಂಗಳಮುಖಿಯರಿದ್ದಾರೆ. ಸಮಾಜ ಅವರನ್ನು ಒಪ್ಪಿಕೊಳ್ಳುತ್ತಿಲ್ಲ. ಶೋಷಿತ ವರ್ಗದಲ್ಲಿ ಬದುಕುತ್ತಿದ್ದಾರೆ. ಅವರನ್ನು ಗೌರವಿಸುವಂಥ ಕೆಲಸ ಆಗಬೇಕು. ಸರ್ಕಾರ ಮಂಗಳಮುಖಿಯರಿಗೆ ಆರ್ಥಿಕವಾಗಿ, ಸ್ವಾವಲಂಬನೆ ಬದುಕಿಗೆ ಪೂರಕ ಯೋಜನೆಗಳನ್ನು ಜಾರಿಗೆ ತರಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜ್ ಮೇಲ್ವಿಚಾರಣ ಸಮಿತಿ ಉಪಾಧ್ಯಕ್ಷ ವಿ.ಎಫ್. ಗುಡದಪ್ಪನವರ ಮಾತನಾಡಿದರು. ವಿದ್ಯಾರ್ಥಿಗಳು ಮಂಜಮ್ಮ ಜೋಗತಿ ಅವರ ಜೀವನದ ಕುರಿತು ಕಿರುನಾಟಕ ಪ್ರದರ್ಶಿಸಿದರು. ಪ್ರಾಚಾರ್ಯ ಡಾ.ಡಿ.ಸಿ. ಮಠ, ಎಂ.ಎಸ್. ಶಿವಶೆಟ್ಟರ, ಟಿ.ಬಿ. ದಂಡಿನ, ಡಾ.ಆರ್.ಎಚ್. ಜಂಗಣವಾರಿ ಇದ್ದರು. ಡಾ. ಎ.ಎಸ್. ಕಲ್ಯಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಜೆ. ಕುಮಾರ ಸ್ವಾಗತಿಸಿದರು. ಡಾ. ಸಂತೋಷ ಹಿರೇಮಠ ನಿರೂಪಿಸಿದರು. ಡಾ. ಸಚಿನ್ ಉಪ್ಪಾರ ವಂದಿಸಿದರು.