ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ ಕಾಪು ಪುರಸಭೆ ವ್ಯಾಪ್ತಿಯಲ್ಲಿ ಜಲಮಂಡಳಿಯಿಂದ ನೀರಿನ ಪೈಪ್‌ಲೈನ್ ಕಾಮಗಾರಿಗಾಗಿ ಅವ್ಯವಾಹತ ರಸ್ತೆ ಅಗೆತದಿಂದ ಆಗಿರುವ ಸಮಸ್ಯೆ ಪರಿಹರಿಸದೆ ಹೊಸ ಕಾಮಗಾರಿ ನಡೆಸದಂತೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಗುರುವಾರ ಕಾಪು ಪುರಸಭೆ ಸಾಮಾನ್ಯ ಸಭೆಯಲ್ಲಿ ಜಲಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ನೀರು ಪೈಪ್‌ಲೈನ್ ಅಳವಡಿಕೆಗೆ ಎಲ್ಲೆಂದರಲ್ಲಿ ರಸ್ತೆ ಅಗೆತದಿಂದ ತೊಂದರೆಯಾಗುತ್ತಿರುವ ಬಗ್ಗೆ ಜಲಮಂಡಳಿ ಇಂಜಿನಿಯರ್‌ಗೆ ಕರೆ ಮಾಡಿದರೂ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಸದಸ್ಯರು ದೂರಿದರಲ್ಲದೆ ಸಮಜಾಯಿಷಿ ನೀಡಲು ಬಂದ ಇಂಜಿನಿಯರ್ ಸೋಮಶೇಖರ ರೆಡ್ಡಿ ಅವರನ್ನು ತರಾಟೆಗೆ ತೆಗೆದುಕೊಂಡರು. ವಾರದೊಳಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಇಂಜಿನಿಯರ್ ಭರವಸೆ ನೀಡಿದರು. ನೀರಿನ ಸಂಪರ್ಕ ಪೂರ್ಣತೆಗೆ ಸಹಕರಿಸಿ: ಪುರಸಭೆ ವ್ಯಾಪ್ತಿಯಲ್ಲಿ ಕೇವಲ 200 ಮನೆಗಳಿಗೆ ಮಾತ್ರ ನೀರು ಸಂಪರ್ಕ ಬಾಕಿಯಿದ್ದು, ಸಂಪರ್ಕ ಪಡೆಯದವರ ಪಟ್ಟಿ ಸಿದ್ಧಪಡಿಸಿ ವಾರದೊಳಗೆ ಉಚಿತ ಸಂಪರ್ಕ ಪಡೆದುಕೊಳ್ಳುವಂತೆ ಸದಸ್ಯರು ಅವರ ಮನವೊಲಿಸುವಂತೆ ಜಲಮಂಡಳಿ ಅಧಿಕಾರಿಗಳು ಮನವಿ ಮಾಡಿದರು. 200 ಸಂಪರ್ಕ ಪೂರ್ಣಗೊಂಡಲ್ಲಿ ಶೇ.100 ಗುರಿ ಸಾಧನೆಗೆ ಅನುಕೂಲವಾಗಲಿದೆ. ಕುರ್ಕಾಲು ಅಣೆಕಟ್ಟೆಯಿಂದ ನೀರು ಸರಬರಾಜು ಯೋಜನೆ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಪುರಸಭೆ ವ್ಯಾಪ್ತಿಯಲ್ಲಿ ಪ್ರಾಯೋಗಿಕ ಸರಬರಾಜು ಮಾಡಿ ಪರಿಶೀಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಸ್ಥಾಯಿ ಸಮಿತಿಗೆ ಆಯ್ಕೆ ಗೊಂದಲ: 23 ಸದಸ್ಯ ಬಲದ ಪುರಸಭೆಯಲ್ಲಿ 11 ಮಂದಿಯನ್ನು ಸ್ಥಾಯಿ ಸಮಿತಿಗೆ ಆಯ್ಕೆ ಮಾಡಬೇಕಿದ್ದು, ಹಿಂದಿನ ಅವಧಿಯಲ್ಲಿ ನಡೆದಂತೆ ಆಡಳಿತ ಪಕ್ಷಕ್ಕೆ 7, ವಿಪಕ್ಷಕ್ಕೆ 4 ಸ್ಥಾನ ನೀಡಬಹುದು ಎಂದು ಹಿರಿಯ ಸದಸ್ಯ ಅರುಣ್ ಶೆಟ್ಟಿ ಪಾದೂರು ತಿಳಿಸಿದರು. ಈ ಸಂದರ್ಭ ವಿಪಕ್ಷ ಸದಸ್ಯ ಅಮೀರುದ್ದೀನ್, ಈ ಬಾರಿ ಜೆಡಿಎಸ್ ಮತ್ತು ಎಸ್‌ಡಿಪಿಐ ಇರುವುದರಿಂದ ಅದನ್ನು ಒಪ್ಪಲಾಗದು ಎಂದರು. ಈ ವಿಷಯ ಆಡಳಿತ ಮತ್ತು ವಿಪಕ್ಷದ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಇದರ ನಡುವೆಯೇ ಆಡಳಿತ ಪಕ್ಷ ಬಿಜೆಪಿಯು ಜೆಡಿಎಸ್‌ನ ಓರ್ವ ಸದಸ್ಯ ಸೇರಿದಂತೆ 7 ಮಂದಿ ಸದಸ್ಯರ ಹೆಸರು ಸೂಚಿಸಿ, ಅನುಮೋದಿಸಿದ್ದು, ಕಾಂಗ್ರೆಸ್ 4 ಸದಸ್ಯರ ಹೆಸರು ಸೂಚಿಸಿ ಅನುಮೋದಿಸಿತ್ತು. ಎಸ್‌ಡಿಪಿಐನ ಇಬ್ಬರು ಸದಸ್ಯರಿದ್ದು, ಒಬ್ಬರ ಹೆಸರನ್ನು ಸೂಚಿಸಲಾಯಿತು. ಆದರೆ ಅವರ ಹೆಸರಿಗೆ ಅನುಮೋದನೆ ಸಿಗದೇ ಅಂತಿಮವಾಗಿ ಬಿಜೆಪಿಯಿಂದ ಅನಿಲ್‌ಕುಮಾರ್, ನಿತಿನ್ ಕುಮಾರ್, ಮೋಹಿನಿ ಶೆಟ್ಟಿ, ನಾಗೇಶ್, ಉಮೇಶ್ ಕರ್ಕೇರ, ಲತಾ ದೇವಾಡಿಗ, ಸುರೇಶ್ ದೇವಾಡಿಗ ಮತ್ತು ಕಾಂಗ್ರೆಸ್ ಪಕ್ಷದಿಂದ ಫರ್ಜಾನ, ಸತೀಶ್ಚಂದ್ರ, ಶೋಭಾ ಬಂಗೇರ, ಮಹಮ್ಮದ್ ಆಸಿಫ್ ಅವರ ಹೆಸರನ್ನು ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ ಘೋಷಿಸಿದರು. ಉಪಾಧ್ಯಕ್ಷೆ ಸರಿತಾ ಶಿವಾನಂದ್ ಉಪಸ್ಥಿತರಿದ್ದರು.
ಕಾಪು ತಾಲೂಕು ಆಡಳಿತ ಮತ್ತು ನಾಡಹಬ್ಬಗಳ ಆಚರಣಾ ಸಮಿತಿ ನಡೆಸುವ ರಾಷ್ಟ್ರೀಯ ಹಬ್ಬಗಳ ಆಚರಣೆಗೆ ಪುರಸಭೆ ಹಣ ಖರ್ಚು ಮಾಡುವ ಬಗ್ಗೆ ಸದಸ್ಯರಿಂದ ಆಕ್ಷೇಪ ವ್ಯಕ್ತವಾಯಿತು. ತಾಲೂಕು ಆಡಳಿತವೇ ಇದರ ಮುತುವರ್ಜಿ ವಹಿಸಿ ಕಾರ್ಯಕ್ರಮ ನಡೆಸಬೇಕು ಎಂದು ಒತ್ತಾಯಿಸಿದರು.
ಕಾಪು ಬೀಚ್‌ನಲ್ಲಿ ಪುರಸಭೆ ಅನುದಾನದಿಂದ ನಿರ್ಮಿಸಿದ ಹೈಮಾಸ್ಟ್ ದೀಪ ಹಾಗೂ ಶೌಚಗೃಹ ನಿರ್ವಹಣೆಗೆ ಪ್ರವಾಸೋದ್ಯಮ ಇಲಾಖೆ ಟೆಂಡರ್ ನೀಡಿ, ಬೀಚ್ ನಿರ್ವಹಣೆ ಮಾಡುತ್ತಿರುವವರಿಂದ ಹಣ ಪಡೆಯುತ್ತಿದೆ. ನಿರ್ವಹಣೆ ಹೊಣೆ ಪುರಸಭೆ ಮಾಡಬೇಕಿದೆ. ಇದೀಗ ಹೈಮಾಸ್ಟ್ ದೀಪಗಳು ಕೆಟ್ಟಿದ್ದು, ನಿರ್ವಹಣೆಗೆ 5 ಲಕ್ಷ ರೂ. ವೆಚ್ಚವಾಗಲಿದೆ. ಇದು ಪುರಸಭೆಗೆ ಹೊರೆಯಾಗುತ್ತಿದೆ ಎಂದು ಮುಖ್ಯಾಧಿಕಾರಿ ನಾಗರಾಜ್ ಸಿ. ಸಭೆ ಗಮನಕ್ಕೆ ತಂದರು. ಈ ಬಗ್ಗೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ಶಾಸಕರು ತಿಳಿಸಿದರು.
ಪುರಸಭೆ ವ್ಯಾಪ್ತಿಯಲ್ಲಿ ಬಿಪಿಎಲ್ ಪಡಿತರ ಚೀಟಿ ರದ್ದು ಕುರಿತಾದ ಗೊಂದಲ ಬಗೆಹರಿಸುವಂತೆ ಸದಸ್ಯ ಅರುಣ್ ಶೆಟ್ಟಿ ಪಾದೂರು ಒತ್ತಾಯಿಸಿದರು. ಕಿರಣ್ ಆಳ್ವ, ನೂರುದ್ದೀನ್ ಪಡಿತರ ವಿತರಣೆಯ ಸರ್ವರ್ ಸಮಸ್ಯೆ, ಅಂಗಡಿಗಳಲ್ಲಿ ಸಿಬಂದಿ ಉಡಾಫೆ ಉತ್ತರದಿಂದ ಜನ ಬೇಸತ್ತಿದ್ದಾರೆ ಎಂದು ಆರೋಪಿಸಿದರು. ಆಹಾರ ನಿರೀಕ್ಷಕ ಲೀಲಾನಂದ್ ಉತ್ತರಿಸಿ 1.20 ಲಕ್ಷ ರೂ.ಗಿಂತ ಹೆಚ್ಚುವರಿ ಆದಾಯ ಮತ್ತು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯಾಗಿರುವ 110 ಬಿಪಿಎಲ್ ಕಾರ್ಡ್‌ಗಳನ್ನು ಗುರುತಿಸಲಾಗಿದೆ. ಪಡಿತರ ಅಂಗಡಿಗಳ ಸಮಸ್ಯೆ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.