ಜಿಲ್ಲೆ

ಹುಲ್ಲಿನ ಪಿಂಡಿ ಪ್ಲಾಸ್ಟಿಕ್, ಟಾಯಿನ್ ದಾರದಿಂದ ಕಟ್ಟಬೇಡಿ

ಬಸವರಾಜ ವೀರಪ್ಪ ಗರಗ

ಶಿರಸಿ: ಪ್ಲಾಸ್ಟಿಕ್, ಟಾಯಿನ್ ದಾರದಿಂದ ಹುಲ್ಲಿನ ಪಿಂಡಿಗಳನ್ನು ಕಟ್ಟುವುದರಿಂದ ಆಕಳ ಜೀವಕ್ಕೇ ಮಾರಕವಾದ ಘಟನೆಗಳು ಜಿಲ್ಲೆಯ ಮಲೆನಾಡಿನ ತಾಲೂಕುಗಳಲ್ಲಿ ಹೆಚ್ಚುತ್ತಿವೆ.

ಶಿರಸಿ, ಸಿದ್ದಾಪುರ ಮತ್ತು ಯಲ್ಲಾಪುರ ತಾಲೂಕುಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಭತ್ತದ ಕೃಷಿ ಕಡಿಮೆ ಆಗಿರುವ ಕಾರಣ ಆಕಳ ಮೇವಿಗಾಗಿ ಭತ್ತದ ಹುಲ್ಲನ್ನು ಹೊರ ಜಿಲ್ಲೆಗಳಿಂದ ತರಿಸಿಕೊಳ್ಳಲಾಗುತ್ತಿದೆ. ಆಕಳಿಗೆ ಮೇವು ಹಾಕುವಾಗ ಈ ದಾರಗಳು ಆಕಳ ಹೊಟ್ಟೆಗೆ ಸೇರಿಕೊಳ್ಳುತ್ತಿವೆ. ಆಕಳು ಮೆಲುಕು ಹಾಕುವ ವೇಳೆ ಈ ದಾರ ನಾಲಿಗೆಗೆ ಸಿಕ್ಕಿ ತೊಂದರೆ ಉಂಟು ಮಾಡುತ್ತಿವೆ.

ಕಳೆದ ನಾಲ್ಕು ದಿನಗಳ ಹಿಂದೆ ತಾಲೂಕಿನ ಕುಕ್ರಿಯಲ್ಲಿ ಇಂಥದ್ದೇ ಘಟನೆ ನಡೆದಿದೆ. ಇಲ್ಲಿಯ ರೈತ ಮಂಜುನಾಥ ಹೆಗಡೆ ಅವರ ಮನೆಯ ಆಕಳು ಮೇವು ತಿನ್ನುವುದನ್ನು ನಿಲ್ಲಿಸಿತ್ತು. ಆಕಳಿಗೆ ಜ್ವರ ಬಂದಿರಬಹುದು ಎಂದು ರೈತರು ತಿಳಿದಿದ್ದರು. ಆಕಳ ನಾಲಿಗೆಯೇ ಕತ್ತರಿಸಿ ಬಿದ್ದ ಘಟನೆ ನಡೆದಿದೆ.

ಒಣಹುಲ್ಲಿನ ಪಿಂಡಿಯನ್ನು ಹಾಗೆಯೇ ಹಾಕುವುದರಿಂದ ಹುಲ್ಲಿನ ಜತೆ ಟಾಯಿನ್ ದಾರಗಳು ದನ-ಕರುಗಳ ಹೊಟ್ಟೆ ಸೇರುತ್ತವೆ. ಅವು ಮೆಲುಕು ಹಾಕುವಾಗ ನಾಲಿಗೆಗೆ ಸಿಲುಕಿ ನಾಲಿಗೆ ತುಂಡಾಗುತ್ತವೆ. ಕಳೆದ ಒಂದು ವರ್ಷದಿಂದ ಇಂತಹ ಹಲವು ಪ್ರಕರಣಗಳು ವರದಿಯಾಗಿದ್ದು, ರೈತರು ಇದರ ಕುರಿತು ಎಚ್ಚರಿಕೆ ವಹಿಸುವುದು ಅತ್ಯವಶ್ಯವಾಗಿದೆ. | ಡಾ.ದಿನೇಶ ಉಪನಿರ್ದೇಶಕ, ಪಶು ಸಂಗೋಪನಾ ಇಲಾಖೆ