ಮದ್ದೂರು: ಆಯುರ್ವೇದ ಔಷಧದಿಂದ ಆರೋಗ್ಯ ಸಮಸ್ಯೆಗಳನ್ನು ಶಾಶ್ವತವಾಗಿ ಬಗೆಹರಿಸಲು ಸಾಧ್ಯವಿದೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಔಷಧ ಸೇವಿಸುವ ಪ್ರವೃತ್ತಿಯನ್ನು ಬಿಡಬೇಕು ಎಂದು ಕೊಪ್ಪದ ಯಂಬಾರ್ಜಿಯರ್ ಮಠದ ಅಧ್ಯಕ್ಷ ಕುಮಾರ್ ಕೊಪ್ಪ ತಿಳಿಸಿದರು.
ತಾಲೂಕಿನ ಅವ್ವೇರಹಳ್ಳಿ ಗ್ರಾಮದ ಅಭೀಷ್ಠ ಸಿದ್ಧಿ ವಿನಾಯಕ ದೇವಸ್ಥಾನದ ಆವರಣದಲ್ಲಿ ಜಿ.ಮಾದೇಗೌಡ ಇನ್ಸ್ಟಿಟ್ಯೂಟ್ ಆಫ್ ನ್ಯಾಚುರೋಪತಿ ಆ್ಯಂಡ್ ಯೋಗ ವಿಜ್ಞಾನ ಕಾಲೇಜು ಭಾರತೀನಗರ, ಪ್ರಕೃತಿ ಆರೋಗ್ಯ ಧಾಮದ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಿದ್ದ ಉಚಿತ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಆರೋಗ್ಯ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಕೃತಿ ನಮಗೆ ಎಲ್ಲವನ್ನೂ ಕೊಟ್ಟಿದೆ. ಪ್ರಕೃತಿಗೂ ಮತ್ತು ಮಾನವರಿಗೂ ಅಂತರ ಕಡಿಮೆಯಾಗಿರುವುದರಿಂದ ಕಾಯಿಲೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರಕೃತಿದತ್ತವಾಗಿ ಸಿಗುವ ಹಣ್ಣು, ತರಕಾರಿ, ಸೊಪ್ಪು, ಮೊಳಕೆ ಕಾಳುಗಳು ಹಾಗೂ ಇತರ ಆರೋಗ್ಯದಾಯಕ ಆಹಾರವನ್ನು ಸೇವಿಸಿದರೆ ಆರೋಗ್ಯಯುತ ಜೀವನ ಸಾಗಿಸಬಹುದು ಎಂದರು.
ಪಶು ವೈದ್ಯಾಧಿಕಾರಿ ಅವ್ವೇರಹಳ್ಳಿ ಡಾ.ಎ.ಎನ್.ಮಧು ಮಾತನಾಡಿ, ಮಾನವ ಆಧುನಿಕ ಜಗತ್ತಿನ ನಾಗಾಲೋಟದಲ್ಲಿ ಆರೋಗ್ಯವನ್ನು ಕಡೆಗಣಿಸುತ್ತಿದ್ದಾನೆ. ಪ್ರಕೃತಿಯನ್ನು ಮರೆತು ಕೃತಕ ಬದುಕಿನೊಂದಿಗೆ ಬೆರೆತುಕೊಂಡಿದ್ದಾನೆ. ಪ್ರತಿಯೊಂದು ಸಮಸ್ಯೆಗೂ ಆಸ್ಪತ್ರೆಗೆ ಹೋಗುವುದನ್ನು ಬಿಟ್ಟು ಮನೆಯಲ್ಲೇ ಮದ್ದು ತಯಾರಿಸಿಕೊಂಡು ಸೇವಿಸುವುದರಿಂದ ಅಡ್ಡ ಪರಿಣಾಮ ಬೀರದೆ ಆರೋಗ್ಯವಂತರಾಗಿ ಜೀವಿಸಬಹುದು. ಮನೆಯ ಇಕ್ಕೆಲಗಳಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಸಿ, ಬಳಸುವ ಪ್ರವೃತ್ತಿ ಬೆಳೆಯಬೇಕು. ಆಗ ಮಾತ್ರ ಸತ್ವ ಪೂರ್ಣ ಮತ್ತು ಆರೋಗ್ಯ ಪೂರ್ಣ ಜೀವನ ಮಾಡಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು.
ಶಿಬಿರದಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜು, ಥೈರಾಯ್ಡ , ಗ್ಯಾಸ್ಟ್ರಿಕ್, ಮಲಬದ್ಧತೆ, ಮುಟ್ಟಿನ ಸಮಸ್ಯೆ, ಅಜೀರ್ಣ, ಮಾನಸಿಕ ಸಮಸ್ಯೆ, ಮಂಡಿ ನೋವು, ಬೆನ್ನು ನೋವು ಸೇರಿದಂತೆ ಇತರ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಯಿತು. ನಂತರ ಯೋಗ ಚಿಕಿತ್ಸೆ, ಮಣ್ಣಿನ ಚಿಕಿತ್ಸೆ, ಸೂಜಿ ಚಿಕಿತ್ಸೆ, ಆಹಾರ ಸಮಾಲೋಚನೆ, ಆಪ್ತ ಸಮಾಲೋಚನೆ ಮಾಡಿ ಅಗತ್ಯವಿರುವವರಿಗೆ ಉಚಿತ ಡಯಟ್ ಕಿಟ್‌ಗಳನ್ನು ವಿತರಿಸಲಾಯಿತು.
ಕಲಾವಿದ ತೋಟದ ಮನೆ ನಾಗೇಶ್, ವೈದ್ಯ ಡಾ.ಪ್ರಜ್ವಲ್‌ಬಿ.ಗೌಡ, ಗ್ರಾಪಂ ಸದಸ್ಯ ದೇವರಾಜು, ಪ್ರಾಂಶುಪಾಲ ಡಾ.ಜಿ.ಸಂತಕುಮಾರ್, ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಚಾಮನಹಳ್ಳಿ ಮಂಜು, ಸೋಮಳಮ್ಮ ಇದ್ದರು.