ಯಳಂದೂರು : ವಿದ್ಯಾರ್ಥಿಗಳು ಬಾಹ್ಯ ಆಕರ್ಷಣೆಗೆ ಒಳಗಾಗಿ ತಮ್ಮ ಅಮೂಲ್ಯ ಜೀವನ ಹಾಳು ಮಾಡಿಕೊಳ್ಳುಳ್ಳಬಾರದು. ಪ್ರತಿ ವಿಷಯವನ್ನು ಆತ್ಮ ವಿಮರ್ಶೆಗೆ ಒಳಪಡಿಸಿ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಪ್ರಭಾರ ಬಿಆರ್‌ಸಿ ನಂಜುಂಡಯ್ಯ ಸಲಹೆ ನೀಡಿದರು.
ಪಟ್ಟಣದ ವೈ.ಎಂ. ಮಲ್ಲಿಕಾರ್ಜುನಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್, ರೋವರ್ಸ್, ರೇಜಂರ್ಸ್, ರೆಡ್ ಕ್ರಾಸ್ ಹಾಗೂ ವಿವಿಧ ಸಮಿತಿಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಉನ್ನತ ವ್ಯಾಸಂಗದ ಅವಧಿಯಲ್ಲಿ ಅಮೂಲ್ಯ ಸಮಯ ವ್ಯರ್ಥ ಮಾಡಬಾರದು.
ಇದು ವ್ಯಾಸಂಗದ ಮಹತ್ವಪೂರ್ಣ ದಿನಗಳಾಗಿದ್ದು, ನಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವುದು ಇಲ್ಲಿಂದಲೇ. ಹಾಗಾಗಿ ಇಲ್ಲಿ ಇತರೆ ಆಕರ್ಷಣೆಗಳಿಗೆ ಒಳಪಡದೆ ವ್ಯಾಸಂಗದ ಕಡೆ ಹೆಚ್ಚಿನ ಗಮನ ನೀಡಿ ತಮ್ಮ ಭವಿಷ್ಯ ರೂಪಿಸಿಕೊಳ್ಳುವ ಚಿಂತನೆಯನ್ನು ನಡೆಸಬೇಕು. ತಮ್ಮ ತಂದೆ, ತಾಯಿಗಳನ್ನು, ಗುರುಹಿರಿಯರನ್ನು ಗೌರವಿಸುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು. ಮೌಢ್ಯತೆಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು.
ಯಳಂದೂರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿದ್ದು, ಇದಕ್ಕೆ ದಾನಿಗಳು ಸ್ಥಳವನ್ನು ನೀಡಿದ್ದರೂ ಕಾಲೇಜು ಕಟ್ಟಡ ಇನ್ನೂ ಆರಂಭಗೊಂಡಿಲ್ಲ. ಈ ಬಗ್ಗೆ ಎಲ್ಲರೂ ಕೈಜೋಡಿಸಿ ಸಂಬಂಧಪಟ್ಟವರಿಗೆ ಒತ್ತಡ ಹೇರಿ, ಸುಸಜ್ಜಿತ ಕ್ಯಾಂಪಸ್ ಸ್ಥಾಪನೆಯಾಗಲು ಸಹಕರಿಸಬೇಕು ಎಂದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು, ಪಪಂ ಸದಸ್ಯ ಮಹೇಶ್, ಕಾಲೇಜಿನ ಪ್ರಾಂಶುಪಾಲ ವಿಜಯ, ಸ್ಟೀಫನ್ ಮಾತನಾಡಿದರು.
ಪಪಂ ಅಧ್ಯಕ್ಷೆ ಲಕ್ಷ್ಮೀ ಮಲ್ಲು ಉಪನ್ಯಾಸಕರಾದ ಟಿ.ಮಹಂತೇಶ್, ಡಾ. ಲಿಖಿತ ಅನುರಾಧ, ಎಂ. ವಿಕಾಶ್, ಎಂ.ಗಿರಿಜಾ, ವಾಸುದೇವ, ದಾಕ್ಷಾಯಣಿ, ಕೆ.ಶ್ವೇತಾ ಗ್ರಂಥಪಾಲಕ ಎಚ್.ಎ.ಅರುಣ್ ಇತರರು ಇದ್ದರು.