ಕೆ.ಬಾಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೂರಿಕಾಡು ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಹೊರರಾಜ್ಯದ ಕಾರ್ಮಿಕರ ದಾಖಲೆ ಸಂಗ್ರಹ ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಮುಕ್ಕಾಟಿರ ರಿತೇಶ್ ಬಿದ್ದಪ್ಪ ಮಾತನಾಡಿದರು. ಮಹದೇವಪ್ಪ ರಾಧಾ, ವಿಜಯರ್, ಬಾಚರಣಯಂಡ ಅಯ್ಯಪ್ಪ, ಪೆಮ್ಮಣಮಾಡ ನವೀನ್, ಗಾಡಂಗಡ ರಾಜ ಇತರರಿದ್ದರು. 
ಜಿಲ್ಲೆ

ಹೊರರಾಜ್ಯದ ಕಾರ್ಮಿಕರಿಗೆ ಬಾಡಿಗೆ ಮನೆ ನೀಡಬೇಡಿ

ಗೋಣಿಕೊಪ್ಪ: ತೋಟದ ಕಾರ್ಮಿಕರಾಗಿ ಆಗಮಿಸುತ್ತಿದ್ದ ಹೊರರಾಜ್ಯದ ಕಾರ್ಮಿಕರು ಇದೀಗ ಲೈನ್ ಮನೆಗಳ ಹೊರತಾಗಿಯೂ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದು, ಈ ನಿಟ್ಟಿನಲ್ಲಿ ಹೊರರಾಜ್ಯದ ಕಾರ್ಮಿಕರಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಾಡಿಗೆ ಮನೆಗಳನ್ನು ನೀಡದಂತೆ ಕೆ.ಬಾಡಗ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮುಕ್ಕಾಟಿರ ರಿತೇಶ್ ಬಿದ್ದಪ್ಪ ಪಂಚಾಯಿತಿ ವ್ಯಾಪ್ತಿಯ ಬೆಳೆಗಾರರಿಗೆ ಹಾಗೂ ರೈತರಿಗೆ ಕರೆ ನೀಡಿದರು.

ಕೇರಳ ಗಡಿ ಭಾಗವಾಗಿರುವ ಕುಟ್ಟ ಸಮೀಪದ ಕೆ.ಬಾಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೂರಿಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ಹೊರರಾಜ್ಯದ ಕಾರ್ಮಿಕರ ದಾಖಲೆ ಸಂಗ್ರಹ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಕೊಡಗಿನಲ್ಲಿ ಹೊರ ರಾಜ್ಯದ ಕಾರ್ಮಿಕರಿಂದ ಅಲ್ಲಲ್ಲಿ ಹಲವು ಘಟನೆಗಳು ನಡೆಯುತ್ತಿದ್ದು, ಪ್ರಕರಣಗಳು ದಾಖಲಾಗುತ್ತಿವೆ. ಇದರಿಂದ ಎಚ್ಚೆತ್ತುಕೊಳ್ಳಲು ದಾಖಲೆ ಸಂಗ್ರಹ ಕಾರ್ಯಕ್ರಮ ಪಂಚಾಯಿತಿ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದರು.

ಇದೇ ಮೊದಲ ಬಾರಿಗೆ ಹೊರರಾಜ್ಯದ ಕಾರ್ಮಿಕರ ಅಗತ್ಯ ದಾಖಲಾತಿಯೊಂದಿಗೆ ಅವರ ಹೆಬ್ಬೆರಳಿನ ಗುರುತನ್ನು ದಾಖಲೆಯಾಗಿ ರಿಜಿಸ್ಟ್ರರ್‌ನಲ್ಲಿ ಸಂಗ್ರಹಿಸಲಾಯಿತು. ದಾಖಲೆಯ ಸಂಗ್ರಹದ ಬಗ್ಗೆ ಕಾರ್ಮಿಕರಿಗೆ ಅರಿವು ಮೂಡಿಸಲಾಯಿತು. ಮುಂಜಾನೆಯಿಂದಲೇ ಬೆಳೆಗಾರರು ತಮ್ಮ ತೋಟದ ಕಾರ್ಮಿಕರನ್ನು ದಾಖಲೆ ಸಂಗ್ರಹಕ್ಕಾಗಿ ಮೈದಾನಕ್ಕೆ ಕರೆ ತಂದಿದ್ದರು.

ಇತ್ತೀಚಿನ ದಿನಗಳಲ್ಲಿ ಅಸ್ಸಾಂ ಸೇರಿದಂತೆ ಹೊರರಾಜ್ಯದಿಂದ ಕೊಡಗು ಜಿಲ್ಲೆಗೆ ಕಾರ್ಮಿಕರಾಗಿ ಆಗಮಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಹಲವು ಅಹಿತಕರ ಘಟನೆಗಳು ಅಲ್ಲಲ್ಲಿ ವರದಿಯಾಗುತ್ತಿವೆ. ಈ ವೇಳೆ ಘಟನೆಗೆ ಸಂಬಂಧಿಸಿದ ವ್ಯಕ್ತಿಗಳನ್ನು ಕಂಡುಹಿಡಿಯಲು ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಕೊಡಗು ಜಿಲ್ಲೆಯ ಕಾಫಿ ತೋಟದಲ್ಲಿ ಹಾಗೂ ಇತರೆಡೆಯಲ್ಲಿ ವಲಸಿಗರಾಗಿ ಆಗಮಿಸಿರುವ ಕಾರ್ಮಿಕರ ದಾಖಲೆಗಳನ್ನು ಕಡ್ಡಾಯವಾಗಿ ಸಂಬಂಧಿಸಿದ ಮಾಲೀಕರು ಸಂಗ್ರಹಿಸಿಡಬೇಕು. ಅಲ್ಲದೆ ಸ್ಥಳೀಯ ಮಟ್ಟದ ಪೊಲೀಸ್ ಠಾಣೆಗೆ ಅಗತ್ಯ ಮಾಹಿತಿ ನೀಡಬೇಕೆಂಬ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಪೊನ್ನಂಪೇಟೆಯ ತಾಲೂಕಿನ ಕೆ.ಬಾಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೈತರ, ಬೆಳೆಗಾರರ ತೋಟದಲ್ಲಿರುವ ಹೊರರಾಜ್ಯದ ಕಾರ್ಮಿಕರ ಮಾಹಿತಿಗಳನ್ನು ಪಡೆಯುವ ನಿಟ್ಟಿನಲ್ಲಿ ವಿಶೇಷ ಪ್ರಯತ್ನ ಮಾಡಲಾಗಿದೆ. ಬೆಳೆಗಾರರು ಪಂಚಾಯಿತಿಯೊಂದಿಗೆ ಸಹಕರಿಸಿದ್ದಾರೆ ಎಂದರು.

ಕುಟ್ಟ ಪೊಲೀಸ್ ಠಾಣೆ ಎಸ್‌ಐ ಮಹದೇವಪ್ಪ ಮಾತನಾಡಿ, ಅಪರಾಧ ಪ್ರಕರಣದಲ್ಲಿ ಭಾಗಿಗಳಾಗಬಾರದು. ಕಳ್ಳತನಕ್ಕೆ ಪ್ರೋತ್ಸಾಹ ನೀಡಬಾರದು. ಅಪ್ರಾಪ್ತ ಕಾರ್ಮಿಕರ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆದಲ್ಲಿ ಕಠಿಣ ಕ್ರಮದೊಂದಿಗೆ ಜೈಲಿಗೆ ಕಳುಹಿಸಲಾಗುವುದು. ಕೂಲಿ ಕೆಲಸಕ್ಕೆ ಬಂದಿರುವ ಕಾರ್ಮಿಕರು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಕಿವಿಮಾತು ಹೇಳಿದರು.

ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರಾಧಾ, ಸದಸ್ಯರಾದ ರೀಟಾ ವಿಜಯ್, ಗ್ರಾಮದ ಪ್ರಮುಖರಾದ ವಕೀಲ ಬಾಚರಣ ಯಂಡ ಅಯ್ಯಪ್ಪ, ಪೆಮ್ಮಣಮಾಡ ನವೀನ್, ಗಾಡಂಗಡ ರಾಜ, ಬೊಳ್ಳೆರ ನರು, ಮುಕ್ಕಾಟಿರ ರಾಜ್ ಕರುಂಬಯ್ಯ, ಚೆಪ್ಪುಡೀರ ವಿಜಯ್, ಪಂಚಾಯಿತಿ ನಿವೃತ್ತ ಅಧಿಕಾರಿ ಕಳ್ಳಿಚಂಡ ಪೂಣಚ್ಚ, ಪಂಚಾಯಿತಿ ಸಿಬ್ಬಂದಿ, ಆಶಾಕಾರ್ಯಕರ್ತೆಯರು, ಎಎಸ್‌ಐ ಬನ್ಸಿ ಗಣಪತಿ ಇತರರಿದ್ದರು.

ಕೆ.ಬಾಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೂರಿಕಾಡು ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಹೊರರಾಜ್ಯದ ಕಾರ್ಮಿಕರ ದಾಖಲೆ ಸಂಗ್ರಹ ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಮುಕ್ಕಾಟಿರ ರಿತೇಶ್ ಬಿದ್ದಪ್ಪ ಮಾತನಾಡಿದರು. ಮಹದೇವಪ್ಪ ರಾಧಾ, ವಿಜಯರ್, ಬಾಚರಣಯಂಡ ಅಯ್ಯಪ್ಪ, ಪೆಮ್ಮಣಮಾಡ ನವೀನ್, ಗಾಡಂಗಡ ರಾಜ ಇತರರಿದ್ದರು.