ಹರೀಶ್ ಬೇಲೂರು ಬೆಂಗಳೂರು
ರಾಜ್ಯಾದ್ಯಂತ ನಾಯಿಕೊಡೆಗಳಂತೆ ತಲೆಎತ್ತುತ್ತಿರುವ ನಕಲಿ ಲೇಔಟ್, ವಸತಿ ಸಮುಚ್ಚಯಗಳಿಗೆ ಕಡಿವಾಣಕ್ಕೆ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ಕೆ-ರೇರಾ) ಮುಂದಾಗಿದೆ.
ರಿಯಲ್ ಎಸ್ಟೇಟ್ ನಿಯಂತ್ರಣ ವತ್ತು ಅಭಿವೃದ್ಧಿ (ರೇರಾ) ಕಾಯ್ದೆ ಅಡಿ ನೋಂದಣಿ ಮಾಡಿಕೊಳ್ಳದ ವಸತಿ ಬಡಾವಣೆ, ಸಮುಚ್ಚಯಗಳನ್ನು ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಯಾವುದೇ ಕಾರಣಕ್ಕೂ ನೋಂದಣಿ ಮಾಡದಂತೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ, ಕೆ-ರೇರಾ ಮನವಿ ಮಾಡಿದೆ.
ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೂಡಿಕೆಗೆ ಉತ್ತೇಜನ, ಖರೀದಿದಾರರ ರಕ್ಷಣೆ, ನಕಲಿ ಲೇಔಟ್‌ಗೆ ಅಂಕುಶ ಹಾಕುವ ಉದ್ದೇಶದಿಂದ ಕೇಂದ್ರ ಸರ್ಕಾರ, 2016ರಿಂದ ದೇಶದಲ್ಲಿ ‘ರೇರಾ’ ಕಾಯ್ದೆ ಜಾರಿಗೆ ತಂದಿತ್ತು. 2017ರ ಜು. 11ರಿಂದ ರಾಜ್ಯದಲ್ಲಿ ಇದು ಅನುಷ್ಠಾನಕ್ಕೆ ಬಂತು. ವಸತಿ ಇಲಾಖೆ ಅಧೀನದಲ್ಲಿ ಕೆ-ರೇರಾ ಕಾರ್ಯನಿರ್ವಹಿಸುತ್ತಿದೆ. ರಾಜ್ಯದಲ್ಲಿ ರೇರಾ ಕಾಯ್ದೆ ಅನ್ವಯ ವಸತಿ ಸಮುಚ್ಚಯ, ಬಡಾವಣೆ ನಿರ್ಮಿಸುವ ಬಿಲ್ಡರ್‌ಗಳು ಪ್ರಾಧಿಕಾರದಿಂದ ಅನುಮೋದನೆ ಪಡೆಯಬೇಕು. ಆದರೆ, ಕೆಲ ಪ್ರಮೋಟರ್‌ಗಳು, ರೇರಾ ನೋಂದಣಿ ಮಾಡಿಕೊಳ್ಳದೆ ಅನಧಿಕೃತವಾಗಿ ಲೇಔಟ್‌ಗಳು ಹೆಚ್ಚಾಗಿ ನಿರ್ಮಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಆ.16ರಂದು ವಸತಿ ಇಲಾಖೆ ಕಾರ್ಯದರ್ಶಿ, ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರ ಜೊತೆ ನಡೆದ ಸಭೆಯಲ್ಲಿ ಸರ್ಚಿಸಲಾಗಿದೆ. ಎರಡು ಇಲಾಖೆಗಳ ಮಧ್ಯೆ ಸಮನ್ವಯ ಸಾಧಿಸಿ ನಿಯಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತಂದರೆ, ನಕಲಿ ಲೇಔಟ್‌ಗಳಿಗೆ ಕಡಿವಾಣ ಹಾಕಬಹುದು ಎಂದು ಸಲಹೆ ವ್ಯಕ್ತವಾಗಿದೆ.
ಕಡ್ಡಾಯ ಷರತ್ತು ಸೇರಿಸಿ
ಸ್ಥಳೀಯ ಯೋಜನಾ ಅಧಿಕಾರಿಗಳು ರೇರಾ ಅನುಮೋದಿತ ವಸತಿ ಯೋಜನೆಯನ್ನು ಪಡೆದಿಲ್ಲ ಎಂಬ ಆರೋಪಗಳಿವೆ. ಯೋಜನಾ ಪ್ರಾಧಿಕಾರದಿಂದ ಅನುಮೋದಿತ ಯೋಜನೆ ಪಡೆಯುವುದು ಹಾಗೂ ವಸತಿ ಯೋಜನೆಗಳ ನೋಂದಣಿಗಾಗಿ ಕೆ-ರೇರಾಗೆ ಅರ್ಜಿ ಸಲ್ಲಿಸುವುದು ಪ್ರಮೋಟರ್ಸ್ ಕರ್ತವ್ಯ. ಈ ಹಿನ್ನೆಲೆ ಆಸ್ತಿ ನೋಂದಾಯಿಸುವ ಮುನ್ನ ವಸತಿ ಬಡಾವಣೆ ಹಾಗೂ ಸಮುಚ್ಚಯಗಳು ರೇರಾ ನೋಂದಣಿ ಖಚಿತಪಡಿಸುವಂತೆ ಸಬ್ ರಿಜಿಸ್ಟ್ರಾರ್‌ಗಳಿಗೆ ಸೂಚಿಸಲು ಎಲ್ಲ ಜಿಲ್ಲಾಧಿಕಾರಿಗಳಿಗೆ ಪ್ರಾಧಿಕಾರ ಮನವಿ ಮಾಡಿದೆ.
ನಿಯಮ ಪಾಲನೆಯಾಗುತ್ತಿಲ್ಲ
ಬಡಾವಣೆ ನೋಂದಣಿ, ಯೋಜನೆ ವಿಸ್ತರಣೆ, ಬಾಕಿ ದೂರುಗಳು, ದೈನಂದಿನ ಕಾರಣ ಪಟ್ಟಿಗಳು, ಆದೇಶ ಮಾರ್ಪಾಡು ಮತ್ತು ದೂರುಗಳ ವಿಲೇವಾರಿ ಸೇರಿ ಇತ್ಯಾದಿ ಸಂಬಂಧಿಸಿ ಎಲ್ಲ ದಾಖಲೆಗಳನ್ನು ಸಾರ್ವಜನಿಕ ವಲಯದಲ್ಲಿ ಲಭ್ಯವಿವೆ. ಪರಿಹಾರಕ್ಕೆ ಸಂಬಂಧಿಸಿದ ದೂರುಗಳನ್ನು ನಿರ್ಣಾಯಕ ಅಧಿಕಾರಿ ನಿರ್ವಹಿಸಿದರೆ, ಇತರ ಎಲ್ಲ ದೂರುಗಳನ್ನು ಪ್ರಾಧಿಕಾರದ ಪೀಠಗಳು ಸೂಕ್ತ ವಿಚಾರಣೆ ನಂತರ ವಿಲೇವಾರಿ ಮಾಡುತ್ತಿವೆ. ದೂರು ಸ್ವೀಕರಿಸಿದ ದಿನಾಂಕದಿಂದ 60 ದಿನದೊಳಗೆ ಪ್ರಾಧಿಕಾರ ಆದೇಶ ನೀಡಬೇಕು. ಆದರೂ ದೂರುದಾರರು ಮತ್ತು ಪ್ರಮೋಟರ್ಸ್ ಪ್ರತಿನಿಧಿಸುವ ವಕೀಲರು, ಯೋಜನೆಗಳ ಸಂಬಂಧಿಸಿದ ಹೆಚ್ಚುವರಿ ದಾಖಲೆ ಸಲ್ಲಿಸಲು ಸಮಯ ವಿಸ್ತರಣೆಗೆ ವಿನಂತಿ ಮಾಡುತ್ತಿರುವುದರಿಂದ ದೂರುಗಳ ವಿಲೇವಾರಿಗಾಗಿ ನೀಡಿರುವ 60 ದಿನದ ಕಾಲಾವಕಾಶ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿಲ್ಲ. ಆದರೂ, ತ್ವರಿತವಾಗಿ ದೂರುಗಳ ವಿಲೇವಾರಿಗೆ ಪ್ರಯತ್ನಿಸಲಾಗುತ್ತಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ಹೇಳುತ್ತಾರೆ.
* ರಾಜ್ಯದಲ್ಲಿ ಈವರೆಗೆ ರೇರಾ ಅಡಿ 1,050 ಬಡಾವಣೆ ನೋಂದಾಯಿಸಿಕೊಂಡಿಲ್ಲ
* ರೇರಾ ನೋಂದಣಿಗೆ 9,462 ಪ್ರಾಜೆಕ್ಟ್‌ಗಳು ಅರ್ಜಿ ಸಲ್ಲಿಕೆ
* ಮೂಲಸೌಕರ್ಯ ಕೊರತೆ ಸಂಬಂಧ 12, 151 ದೂರು
* ಯೋಜನೆ ವಿಸ್ತರಣೆ ಅನುಮೋದನೆಗೆ 877 ಅರ್ಜಿ
* ಒಪ್ಪಂದ ಉಲ್ಲಂಘನೆ, ಪರಿಹಾರ, ಮರುಪಾವತಿ, ಬಾಕಿ ಸೌಲಭ್ಯ, ನಿವೇಶನ ವಿತರಣಾ ದಿನಾಂಕ ಮುಕ್ತಾಯ, ತಪ್ಪಾಗಿ ಸೈಟ್ ಹಂಚಿಕೆ ಕುರಿತು ಹೆಚ್ಚು ದೂರು.