ತರೀಕೆರೆಯಲ್ಲಿ ಗ್ರಾಪಂ ಪಟ್ಟದ ಪಿಡಿಒಗಳಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಜಲಸಂರಕ್ಷಣೆ, ಗುಣಮಟ್ಟ ಪರಿಶೀಲನೆ ಅಂಶಗಳ ಕುರಿತಾದ ಭಿತ್ತಿ ಪತ್ರವನ್ನು ಇಒ ಟಿ.ಎಸ್.ಗಣೇಶ್ ಬಿಡುಗಡೆ ಮಾಡಿದರು.  
ಜಿಲ್ಲೆ

ನೀರಿನ ಮೂಲಗಳು ಕಲುಷಿತವಾಗದಿರಲಿ

ಜಿ.ಹೆಚ್. ಧನ್ಯಕುಮಾರ್

ತರೀಕೆರೆ: ಪಿಡಿಒಗಳು ತಂತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಮೂಲ ಕುಲುಷಿತಗೊಳ್ಳದಂತೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ತಾಪಂ ಇಒ ಟಿ.ಆರ್.ಗಣೇಶ್ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಆರೋಗ್ಯ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ತಾಪಂ ಸಹಯೋಗದಲ್ಲಿ ಡೆಂಘೆ ನಿಯಂತ್ರಣ ಕ್ರಮ, ಕುಡಿಯುವ ನೀರಿನ ಮೂಲಗಳ ಶುಚಿತ್ವ ಕುರಿತು ಗ್ರಾಪಂ ಪಿಡಿಒಗಳಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ಮಳೆಗಾಲದ ಆರಂಭದಲ್ಲೇ ಅಜ್ಜಂಪುರ, ತರೀಕೆರೆಯನ್ನು ಒಳಗೊಂಡಿರುವ ವಿಧಾನ ಸಭಾ ಕ್ಷೇತ್ರದಲ್ಲಿ ಡೆಂಘೆ ಬಾಧಿಸುತ್ತಿದ್ದು, ಮಾರಣಾಂತಿಕ ಕಾಯಿಲೆ ನಿಯಂತ್ರಣಕ್ಕೆ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ ಎಂದು ಪಿಡಿಒಗಳಿಗೆ ಸೂಚಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಜಿ.ಚಂದ್ರಶೇಖರ್ ಮಾತನಾಡಿ, ಜನವರಿಯಿಂದ ಈವರೆಗೆ 25 ಡೆಂಘೆ ಪ್ರಕರಣ ಪತ್ತೆಯಾಗಿದ್ದು, ಎಲ್ಲರಿಗೂ ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ. ಅಂದಿನಿಂದ ಮನೆ, ಮನೆಗೆ ನಿರಂತರ ಭೇಟಿ ನೀಡಿ ಜ್ವರ ಸಮೀಕ್ಷೆ, ಲಾರ್ವಾ ಸರ್ವೇ, ಡೆಂಘೆ ಸಂಬಂಧಿಸಿದಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಜನರು ಡೆಂಘೆ ಉಲ್ಬಣಗೊಳ್ಳದಂತೆ ಎಚ್ಚರ ವಹಿಸಬೇಕು. ನೀರಿನ ಶೇಖರಣಾ ತೊಟ್ಟಿ, ಬ್ಯಾರಲ್, ಡ್ರಮ್‌ಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಬೇಕು. ಮನೆ ಸುತ್ತಮುತ್ತ ಬೀಳುವ ಪ್ಲಾಸ್ಟಿಕ್ ವಸ್ತುಗಳು, ಟೈರ್, ಒಡೆದ ತೆಂಗಿನ ಚಿಪ್ಪುಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು. ಜ್ವರದ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು ಎಂದು ಮನವಿ ಮಾಡಿದರು.
ಕಾರ್ಯಾಗಾರದಲ್ಲಿ ಎಲ್ಲ ಪಿಡಿಒಗಳಿಗೆ ಕುಡಿಯುವ ನೀರಿನ ಗುಣಮಟ್ಟ ಪರಿಶೀಲಿಸುವ ಎ್ಟಿಕೆ ಕಿಟ್ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು. ಸಿಡಿಪಿಒ ಎನ್.ಚರಣ್‌ರಾಜ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಚಿದಾನಂದಪ್ಪ, ಬಿಇಒ ಬಿ.ಗೋವಿಂದಪ್ಪ ಮತ್ತಿತರರಿದ್ದರು.