ಶಿವಮೊಗ್ಗದಲ್ಲಿ ಅಧ್ಯಾತ್ಮ ಉಪನ್ಯಾಸ ಮಾಲಿಕೆಯನ್ನು ಧಾರ್ಮಿಕ ಚಿಂತಕ, ವಾಗ್ಮಿ ಆಯನೂರು ಮಧುಸೂದನಾಚಾರ್ಯ ಉದ್ಘಾಟಿಸಿದರು. ವೆಂಕಟೇಶಮೂರ್ತಿ, ನಾಗಮಣಿ, ಶಂಕರನಾರಾಯಣ್ ಇದ್ದರು. 
ಜಿಲ್ಲೆ

ಪಾಲಕರ ಒಪ್ಪಿಗೆ ಇಲ್ಲದೆ ಮದುವೆ ಬೇಡ

Shivamogga - Desk - Praveena Kumar S

ಶಿವಮೊಗ್ಗ: ಯುವಜನತೆ ಹಿರಿಯರನ್ನು ಆದರ್ಶವಾಗಿಟ್ಟುಕೊಂಡು ಮುನ್ನಡೆಯಬೇಕು. ಜತೆಗೆ ಕಿರಿಯರಿಗೆ ಆದರ್ಶಪ್ರಾಯವಾಗಿದ್ದೇ ಆದಲ್ಲಿ ಇಡೀ ಜೀವನವೇ ಬಂಗಾರವಾಗುತ್ತದೆ ಎಂದು ಧಾರ್ಮಿಕ ಚಿಂತಕ, ವಾಗ್ಮಿ ಆಯನೂರು ಮಧುಸೂದನಾಚಾರ್ಯ ಹೇಳಿದರು.
ನಗರದ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಶುಕ್ರವಾರ ಶಿವಮೊಗ್ಗ ಜಿಲ್ಲಾ ಬ್ರಾಹ್ಮಣ ಮಹಾಸಭಾದಿಂದ ಅಧಿಕ ಮಾಸದಲ್ಲಿ ಅಧ್ಯಾತ್ಮ ಚಿಂತನೆ ವಿಶೇಷ ಉಪನ್ಯಾಸ ಮಾಲಿಕೆ ಉದ್ಘಾಟಿಸಿ ಯುವ ಜನಾಂಗ ಮತ್ತು ಸಂಸ್ಕಾರ ಕುರಿತು ಉಪನ್ಯಾಸ ನೀಡಿದ ಅವರು, ಹಿರಿಯರಿಂದ ಕಲಿತ ಒಳ್ಳೆಯ ಗುಣಗಳನ್ನು ಕಿರಿಯರಿಗೆ ಕೊಡಬೇಕು. ಅದರಿಂದ ಮುಂದಿನ ಪೀಳಿಗೆಯು ಸನ್ಮಾರ್ಗದಲ್ಲಿ ನಡೆಯುವಂತೆ ಮಾಡಿದ ಸಾರ್ಥಕತೆ ಯುವಜನತೆಯದ್ದಾಗಲಿದೆ ಎಂದರು.
ಸಮಾಜದಲ್ಲಿ ತಪ್ಪು ದಾರಿಯಲ್ಲಿ ಹೋಗುತ್ತಿರುವವರನ್ನು ಸರಿ ದಾರಿಗೆ ತರುವ ಕೆಲಸವನ್ನು ಮಾಡಲೇಬೇಕು. ಬದುಕಿನಲ್ಲಿ ನಿರಂತರ ಭಗವಂತನ ಸ್ಮರಣೆ ಮಾಡಿದರೆ ಯಾವುದೇ ಸಮಸ್ಯೆಗಳೂ ಇರುವುದಿಲ್ಲ. ಕೆಲವರು ಭೂತ-ಪ್ರೇತಗಳಿವೆ ಎಂದು ಭಯಪಡಿಸುತ್ತಾರೆ. ಯಾವುದೇ ಕಾರಣಕ್ಕೂ ಅವುಗಳ ಬಗ್ಗೆ ಭಯ ಪಟ್ಟುಕೊಳ್ಳಬಾರದು. ಧೈರ್ಯವಾಗಿ ಮೆಟ್ಟಿ ನಿಲ್ಲುವ ಕೆಲಸ ಆಗಬೇಕಿದೆ ಎಂದು ಹೇಳಿದರು.
ಯುವಜನತೆ ಜೀವನದ ಪ್ರಧಾನವಾದ ಘಟ್ಟ ವಿವಾಹ. ಆದರೆ ಬಹಳಷ್ಟು ಮಂದಿ ಈ ಘಟ್ಟದಲ್ಲಿ ಎಡವುತ್ತಿದ್ದಾರೆ. ಪಾಲಕರ ಒಪ್ಪಿಗೆ ಇಲ್ಲದೆ ವಿವಾಹ ಮಾಡಿಕೊಳ್ಳುವುದು ಒಳ್ಳೆಯದಲ್ಲ. ಇಂತಹ ಸಂಸ್ಕೃತಿ ಹೆಚ್ಚುತ್ತಿದ್ದು ಇದು ಆಗಬಾರದು. ತಂದೆ-ತಾಯಿಯನ್ನು ಒಪ್ಪಿಸಿ ವಿವಾಹ ಆದರೆ ಜೀವನ ಸುಖಕರವಾಗಿರಲಿದೆ. ಹಿರಿಯರನ್ನು ಗೌರವದಿಂದ ಕಾಣಬೇಕು ಮತ್ತು ಪಾಲಕರ ಕಣ್ಣಲ್ಲಿ ನೀರು ತರಿಸಬಾರದು ಎಂದು ಸಲಹೆ ನೀಡಿದರು.
ಜಿಲ್ಲಾ ಬ್ರಾಹ್ಮಣ ಸಂಘದ ಕಾರ್ಯದರ್ಶಿ ವೆಂಕಟೇಶಮೂರ್ತಿ ಪ್ರಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕರಾದ ನಾಗಮಣಿ, ಶಂಕರನಾರಾಯಣ್ ಉಪಸ್ಥಿತರಿದ್ದರು.