ಹುಬ್ಬಳ್ಳಿ: ಶಿರೂರ ಪಾರ್ಕ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ಆದಿ ಶಕ್ತಿ ಮಹಿಳಾ ಮಂಡಳ ವತಿಯಿಂದ ಇಲ್ಲಿಯ ಶಿರೂರ ಪಾರ್ಕ್‌ನಲ್ಲಿ ಪಕ್ಷಿಗಳಿಗೆ ನೀರುಣಿಸುವ ಕಾರ್ಯಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ಸಂಘದ ಅಧ್ಯಕ್ಷ ಡಾ. ಮಹೇಶ ಹೊರಕೇರಿ ಮಾತನಾಡಿ, ಬಿಸಿಲು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪಕ್ಷಿಗಳಿಗೆ ನೀರಿನ ಕೊರತೆ ಆಗಬಾರದು ಎಂಬ ಉದ್ದೇಶದಿಂದ ಈ ಕಾರ್ಯ ಮಾಡಲಾಗುತ್ತಿದೆ. ಗಿಡ-ಮರಗಳಿಗೆ ಅರವಟ್ಟಿಗೆ ಕಟ್ಟಲಾಗಿದೆ ಎಂದರು.
ಆದಿಶಕ್ತಿ ಮಹಿಳಾ ಮಂಡಳದ ಅಧ್ಯಕ್ಷೆ ಪ್ರತಿಮಾ ನಾಯಕ ಮಾತನಾಡಿ, ಸಾರ್ವಜನಿಕರು ತಮ್ಮ ಮನೆಯ ಕೈತೋಟ ಹಾಗೂ ಗಿಡ-ಮರಗಳ ಟೊಂಗೆಗಳಿಗೆ ನೀರಿನ ಅರವಟ್ಟಿಗೆ ಕಟ್ಟಿ, ಪಕ್ಷಿಗಳಿಗೆ ನೀರುಣಿಸುವ ಒಳ್ಳೆಯ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಸಂಘದ ಸದಸ್ಯ ಎಸ್.ಆರ್. ಹೆಗಡೆ ಮಾತನಾಡಿದರು.
ಇನ್ನರ್‌ವೀಲ್ ಕ್ಲಬ್‌ನ ಸದಸ್ಯರು ಹಾಗೂ ಅಮೆರಿಕದಿಂದ ಆಗಮಿಸಿದ್ದ ನೇತ್ರಾ ಹಂಗರಗಿ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಶೈಲೇಶ ಹೊನ್ನಳ್ಳಿ, ಸದಸ್ಯರಾದ ಎ.ವಿ. ಹರ್ಲಾಪುರ, ಶೈಲಾ ಯತ್ನಾಳ ಇತರರು ಉಪಸ್ಥಿತರಿದ್ದರು.