ಕೆಪಿಸಿಸಿ ಸಂಯೋಜಕ ಎಚ್.ಸಿ.ಯೋಗೇಶ್  
ಜಿಲ್ಲೆ

ಸಿದ್ಧಾಂತ ಇಲ್ಲದವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಡಿ: ಎಚ್.ಸಿ.ಯೋಗೇಶ್

ಶಿವಮೊಗ್ಗ: ಮಾಜಿ ಎಂಎಲ್‌ಸಿ ಆಯನೂರು ಮಂಜುನಾಥ್ ಅವರು ಕಾಂಗ್ರೆಸ್ ಸೇರ್ಪಡೆ ಆಗುತ್ತಾರೆಂಬ ಬೆನ್ನಲ್ಲೇ ಜಿಲ್ಲೆಯಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಯಾವ ಕಾರಣಕ್ಕೂ ಆಯನೂರು ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬಾರದು ಎಂದು ಕೆಪಿಸಿಸಿ ಸಂಯೋಜಕ ಎಚ್.ಸಿ.ಯೋಗೇಶ್ ಒತ್ತಾಯಿಸಿದರು.

ಎಐಸಿಸಿ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಪಕ್ಷದ ಹಿರಿಯ ನಾಯಕರ ವಿರುದ್ಧ ಏಕವಚನದಲ್ಲಿ ಟೀಕಿಸಿದ್ದ ಹಾಗೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಕೇವಲ 8 ಸಾವಿರ ಮತ ಪಡೆದಿದ್ದ ಆಯನೂರು ಮಂಜುನಾಥ್ ಅವರಿಗೆ ಕಾಂಗ್ರೆಸ್ ಸೇರುವ ಯಾವುದೇ ನೈತಿಕತೆ ಇಲ್ಲ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಮುಂಬರುವ ಪದವೀಧರರ ಕ್ಷೇತ್ರದ ಚುನಾವಣೆಗೆ ಈಗಾಗಲೇ ಪಕ್ಷದಿಂದ ಯೋಗ್ಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು ಅವರನ್ನು ಪಕ್ಷ ಗೆಲ್ಲಿಸಿಕೊಂಡು ಬರುತ್ತದೆ. ಈ ಹಿಂದೆ ಒಮ್ಮೆ ಬಂದುಹೋಗಿದ್ದ ಮಂಜುನಾಥ್ ಇದೀಗ ಮತ್ತೆ ಎಐಸಿಸಿ ಪದಾಧಿಕಾರಿಗಳು ಮತ್ತು ಕಾಂಗ್ರೆಸ್ಸಿನ ಹಲವು ನಾಯಕರ ಮನೆ ಬಾಗಿಲು ತಟ್ಟುತ್ತಿದ್ದಾರೆ. ಅವಕಾಶಕ್ಕಾಗಿ ಹಾತೊರೆಯುವ ಅವರು ಪಕ್ಷದಿಂದ ಪಕ್ಷಕ್ಕೆ ಹಾರುತ್ತಿರುತ್ತಾರೆ. ಕಾಂಗ್ರೆಸ್ ನಾಯಕರ ವಿರುದ್ಧ ವೈಯಕ್ತಿಕ ಟೀಕೆ ಮಾಡಿದ್ದ ಅವರ ಅವಶ್ಯಕತೆ ಪಕ್ಷಕ್ಕಿಲ್ಲ ಎಂದರು.
ಇದು ನನ್ನೊಬ್ಬನ ವಿರೋಧವಲ್ಲ. ಇದಕ್ಕೆ ಜಿಲ್ಲಾ ಕಾಂಗ್ರೆಸ್‌ನ ಎಲ್ಲರ ವಿರೋಧವಿದೆ. ಹಿಂದೆ ಕೂಡ ಕಾಂಗ್ರೆಸ್ಸಿಗೆ ಬಂದರೆ ಅವರಿಗೆ ಟಿಕೆಟ್ ನೀಡಬಾರದೆಂದು 35 ವಾರ್ಡ್‌ಗಳ ಅಧ್ಯಕ್ಷರು ಆಗ್ರಹಿಸಿದ್ದರು. ಈ ಬಾರಿಯೂ ಪರಿಷತ್ ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡಿರುವ ಅವರಿಗೆ ಒಂದು ವೇಳೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದರೆ ಆ ಸಂದರ್ಭದಲ್ಲಿ ಮುಂದಿನ ಹೋರಾಟದ ಸ್ವರೂಪವನ್ನು ತಿಳಿಸುತ್ತೇವೆ ಎಂದು ಎಚ್ಚರಿಸಿದರು.
ಮಾಜಿ ಎಂಎಲ್‌ಸಿ ಆರ್.ಪ್ರಸನ್ನಕುಮಾರ್, ಮುಖಂಡರಾದ ವಿಶ್ವನಾಥ್ ಕಾಶಿ, ಜ್ಯೋತಿ ಅರಳಪ್ಪ, ಶಾಮೀರ್ ಖಾನ್, ಎಂ.ಎನ್.ಗಂಗಾಧರ್, ಎಸ್.ಎ.ಬಾಬು, ನಿರಂಜನ್, ರಂಗೇಗೌಡ, ಕುಮಾರ್, ಅಲ್ತಾಫ್, ಪರ್ವೀಜ್ ಸುದ್ದಿಗೋಷ್ಠಿಯಲ್ಲಿದ್ದರು.