ವಿಜಯಪುರ: ಸಮಾಜದಲ್ಲಿ ಬೇರು ಬಿಟ್ಟಿದ್ದ ಮೇಲು&ಕೀಳು ಎಂಬ ಭಾವನೆ, ಜಾತಿ ಮತಗಳ ಸಿದ್ಧಾಂತವನ್ನು ಪಕ್ಕಕ್ಕೆ ಸರಿಸಿದವರು ಕನಕದಾಸರು ಎಂದು ಕನ್ನಡ ಭಾಷಾ ಶಿಕ್ಷಕ ವಿಜಯಕುಮಾರ ಚಬನೂರ ಹೇಳಿದರು.
ನಗರ ಹೊರ ವಲಯದ ಎಸ್.ಕುಮಾರ ವಿದ್ಯಾವರ್ಧಕ ಸಂಸ್ಥೆಯ ಸರಸ್ವತಿ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಮತ್ತು ಎಸ್. ಕುಮಾರ ಮಹೇಶ ಪಿಯು ಸೈನ್ಸ್ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಭಕ್ತ ಶ್ರೇಷ್ಠ ಕನಕದಾಸರ ಜಯಂತಿಯಲ್ಲಿ ಮಾತನಾಡಿದ ಅವರು, ಕುಲಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯೇನಾದರೂ ಬಲ್ಲಿರಾ ಎಂದು ವರ್ಗ ತಾರತಮ್ಯದ ವಿರುದ್ಧ ಧ್ವನಿ ಎತ್ತಿದ ಶ್ರೇಷ್ಠ ಸಮಾಜ ಸುಧಾರಕ ಕನಕದಾಸರು ಎಂದರು.
ಕರ್ನಾಟಕದಲ್ಲಿ ಹರಿದಾಸ ಪರಂಪರೆಗೆೆ ಸುಮಾರು 500 ವರ್ಷಗಳ ಭವ್ಯ ಇತಿಹಾಸವಿದೆ. ಕನಕದಾಸರು ತಮ್ಮ ವೈಚಾರಿಕ ಮತ್ತು ಪ್ರತಿಭಟನಾ ನೆಲೆಗಟ್ಟಿನಿಂದ ದಾಸ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಕನಕದಾಸರು, ಶಂಕರಾಚಾರ್ಯರು ಪ್ರತಿಪಾದಿಸಿದ ಅದ್ವೆತ ತತ್ವಸಾರ ಅನುಸರಿಸಿ ನಾನು, ನನ್ನದೆಂಬ ಮೋಹ ಪರಬ್ರಹ್ಮ ಬದುಕು ಜೀವನಸಾರವನ್ನು ಬೋಧಿಸಿ ಮನುಜಕುಲ ಶ್ರೇಷ್ಠ ಎಂಬ ತತ್ವವನ್ನು ಸಾರಿದರು ಎಂದರು.
ಸಂಸ್ಥೆಯ ಸಂಸ್ಥಾಪಕ ಎಸ್. ಕುಮಾರ, ಅಧ್ಯಕ್ಷೆ ಡಾ. ಎಚ್.ಟಿ.ಲತಾದೇವಿ ಮತ್ತು ಮುಖ್ಯಗುರು ಸಿ.ಎನ್. ಕಾಂಬಳೆ ಕನಕದಾಸ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.