ಜಿಲ್ಲೆ

ಗ್ಯಾರಂಟಿ ಯೋಜನೆ ಬಗ್ಗೆ ಅನುಮಾನ ಬೇಡ

ಬ್ಯಾಡಗಿ: ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದರೆ ರೈತರ ಸಂಪೂರ್ಣ ಸಾಲ ಮನ್ನಾ ಹಾಗೂ ಮಹಿಳೆಯರಿಗೆ ಮಹಾಲಕ್ಷ್ಮಿಯೋಜನೆ ಮೂಲಕ 1 ಲಕ್ಷ ರೂಪಾಯಿ ನೀಡಲಾಗುವುದು ಎಂದು ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.

ಪಟ್ಟಣದ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಜಶುಕ್ರವಾರ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಬಿಜೆಪಿಯವರು ಕಾಂಗ್ರೆಸ್ ಗ್ಯಾರಂಟಿ ಯೋಜನೆ ಸಹಿಸದೆ, ಚುನಾವಣೆ ಬಳಿಕ ಯೋಜನೆ ಸ್ಥಗಿತವಾಗಲಿವೆ ಎನ್ನುವ ಮೂಲಕ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಆದರೆ, ನಾವು ರಾಜ್ಯದಲ್ಲಿ ಇನ್ನೂ ನಾಲ್ಕು ವರ್ಷ ಅಧಿಕಾರ ಪೂರೈಸುತ್ತೇವೆ. ಐದು ಯೋಜನೆಗಳನ್ನು ನಿರಂತರವಾಗಿ ಜಾರಿಗೊಳಿಸುತ್ತೇವೆ. ಯಾರಿಗೂ ಅನುಮಾನ ಬೇಡ. ಹಿಂದುಳಿದ ಸಮಾಜಗಳಿಗೂ ಸಾಮಾಜಿಕ ನ್ಯಾಯ ದೊರಕಿಸುತ್ತೇವೆ ಎಂದರು.

ಗ್ಯಾರಂಟಿ ಯೋಜನೆ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಮಾತನಾಡಿ, ಸುಳ್ಳು ಹೇಳಿ ಮತ ಪಡೆಯಲು ಯತ್ನಿಸದೆ, ಜನಪ್ರಿಯ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದೇವೆ. ಬಿಜೆಪಿಯ ಬಣ್ಣದ ಮಾತುಗಳಿಂದ ಜನ ಬೇಸತ್ತಿದ್ದಾರೆ. ಮೂರು ಬಾರಿ ಆಯ್ಕೆಯಾದ ಸಂಸದರು ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿದರು.

ಮುಖಂಡರಾದ ಬಸವರಾಜ ಸವಣೂರು, ಶಿವಪ್ಪ ಅಂಬಲಿ, ದಾನಪ್ಪ ಚೂರಿ, ನಾಗರಾಜ ಆನ್ವೇರಿ, ಶಿವಪುತ್ರಪ್ಪ ಅಗಡಿ, ಗಿರೀಶ ಇಂಡಿಮಠ, ಮುನಾಫ್ ಎಲಿಗಾರ, ಖಾದರಸಾಬ ದೊಡ್ಡಮನಿ, ಲಕ್ಷ್ಮೀ ಜಿಂಗಾಡೆ, ಪ್ರೇಮಾ ದೊಡ್ಡಮನಿ, ಮುನ್ನಾ ಎರೆಸೀಮಿ, ದುರಗೇಶ ಗೋಣೆಮ್ಮನವರ, ರಾಮಣ್ಣ ಉಕ್ಕುಂದ, ನಾಗರಾಜ ಅನ್ವೇರಿ, ಶಿವಪುತ್ರಪ್ಪ ಅಗಡಿ, ಬಸವರಾಜ ಬಳ್ಳಾರಿ ಇದ್ದರು.

ದೇಶದ ಪ್ರಧಾನಿ ಸೋಲುವ ಭಯದಿಂದ ಕೀಳು ಭಾಷೆ ಬಳಕೆ ಮಾಡುತ್ತಿದ್ದಾರೆ. ದೇಶದಲ್ಲಿ ಬಿಜೆಪಿ ಬಗ್ಗೆ ತಿರಸ್ಕಾರ ಭಾವನೆ ಮೂಡಿದೆ. ರಾಜ್ಯಕ್ಕೆ ನೂರು ಬಾರಿ ಪ್ರಧಾನಿ ನರೇಂದ್ರ ಮೋದಿ ಬಂದು ಹೋದರೂ ಅವರಿಗೆ ಸೋಲು ಖಚಿತ. ಸೋಷಿಯಲ್ ಮೀಡಿಯಾದಲ್ಲಿ ಶೇ. 95 ಸುಳ್ಳು ಪ್ರಚಾರ ಮೂಲಕ ಸತ್ಯ ಮರೆಮಾಚಲಾಗುತ್ತಿದೆ. ಬಿಜೆಪಿಗೆ ಮಾತಿನಲ್ಲಿ ಮರಳು ಮಾಡುವ ಚಾಳಿಯಿದ್ದು, ನಾವು ಜನಪರವಾದ ಕಾರ್ಯಕ್ರಮಗಳನ್ನು ರೂಪಿಸಿ ಮನಗೆದ್ದಿದ್ದೇವೆ. ಈ ಬಾರಿ ಹಾವೇರಿ ಗದಗ ಲೋಕಸಭೆ ಕಾಂಗ್ರೆಸ್ ಭದ್ರಕೋಟೆಯಾಗಿದ್ದು, ಪುನಃ ಉಳಿಸಿಕೊಳ್ಳಲಿದ್ದೇವೆ. | ಡಿ.ಆರ್.ಪಾಟೀಲ, ಮಾಜಿ ಶಾಸಕ