ಸಾಗರ: ಗಣಪತಿ ಹಬ್ಬವನ್ನು ಸಾಗರ ತಾಲೂಕಿನಲ್ಲಿ ಸಂಘ-ಸಂಸ್ಥೆಗಳು ಸಡಗರ, ಸಂಭ್ರಮದಿಂದ ನಡೆಸುತ್ತವೆ. ಗಣಪತಿ ಇಡುವ ಜಾಗಗಳಲ್ಲಿ ವಿದ್ಯುತ್ ದೀಪ, ಕುಡಿಯುವ ನೀರು ಮುಂತಾದ ಮೂಲ ಸೌಕರ್ಯಗಳನ್ನು ನೀಡಬೇಕು. ಸಾಗರದ ಜನತ್ ಗಲ್ಲಿ, ಗಣಪತಿ ದೇವಸ್ಥಾನದ ಬಳಿ ಹೈಮಾಸ್ಟ್ ಲೈಟ್‌ಗಳನ್ನು ಅಳವಡಿಸಿ, ಸಾರ್ವಜನಿಕ ಗಣಪತಿ ಇಡುವವರಿಗೆ ಅಗತ್ಯ ದಾಖಲೆಗಳೊಂದಿಗೆ ತುರ್ತು ಅನುಮತಿ ನೀಡುವ ಕೆಲಸ ಆಗಬೇಕು. ಸಾರ್ವಜನಿಕ ಗಣಪತಿ ಇಡುವವರಿಗೆ ಯಾವುದೇ ತೊಂದರೆ ಆಗದಂತೆ ಸಹಕರಿಸಿ ಎಂದು ಅಧಿಕಾರಿಗಳಿಗೆ ಗೋಪಾಲಕೃಷ್ಣ ಸೂಚಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ತಾಲೂಕು ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಕಳೆದ ಎರಡು ಮೂರು ದಿನಗಳಿಂದ ಸಂಚಾರ ನಡೆಸಿ ಜನರ ಅಹವಾಲು ಆಲಿಸುತ್ತಿದ್ದೇನೆ. ಸ್ವಚ್ಛತೆಯ ದೃಷ್ಟಿಯಿಂದ ಬಹಳ ಸಮಸ್ಯೆಗಳಿವೆ. ಎಲ್ಲಿ ನೋಡಿದರಲ್ಲಿ ಕಸದ ರಾಶಿ ಕಾಣುತ್ತಿದ್ದೇವೆ .ಸಮಸ್ಯೆ ಶೀಘ್ರ ಬಗೆ ಹರಿಸಿ, ಇಲ್ಲವಾದರೆ ಅಂತಹವರ ಮೇಲೆ ಕ್ರಮ ಕೈಗೊಳ್ಳಿ ಎಂದು ನಗರಸಭೆ ಆಯುಕ್ತರಿಗೆ ಸೂಚಿಸಿದರು.
ವಿವರಣೆ ನೀಡಿದ ನಗರಸಭೆ ಆಯುಕ್ತ ಎಚ್.ಕೆ.ನಾಗಪ್ಪ, ಕಸ ಒಯ್ಯುವ ಟಿಪ್ಪರ್‌ಗಳ ಸಮಸ್ಯೆಯಿದೆ. ಅದನ್ನು ಸರಿಪಡಿಸಲಾಗುವುದು. ಕೂಡಲೇ ಹೆಚ್ಚುವರಿ ನೌಕರರನ್ನು ನೇಮಿಸಿ ಶುಚಿತ್ವ ಪಾಲನೆ, ಬೀದಿದೀಪಗಳ ಅಳವಡಿಕೆಗೆ ಸೂಕ್ತ ರೀತಿಯ ಅಗತ್ಯಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಸಾಗರದಲ್ಲಿ ಗಾಂಜಾ, ಓಸಿ, ಮಟ್ಕಾ ಪ್ರಕರಣಗಳು ಸಂಪೂರ್ಣ ಬಂದ್ ಆಗಬೇಕು. ಪೊಲೀಸ್ ಇಲಾಖೆ ತುರ್ತು ಆದ್ಯತೆಯ ಮೇಲೆ ಅಗತ್ಯ ಕ್ರಮಕೈಗೊಳ್ಳಲಿ. ಕೆಲವು ಖಾಸಗಿ ಲೇಔಟ್‌ಗಳು ಕುಡುಕರ ಅಡ್ಡೆಯಾಗಿ ಬಿಟ್ಟಿದೆ. ಹೆಣ್ಣುಮಕ್ಕಳು ಓಡಾಡಲು ಸಾಧ್ಯವಿರದ ಪರಿಸ್ಥಿತಿ ಎದುರಾಗಿದೆ. ಎಲ್ಲೆಲ್ಲಿ ಸಮಸ್ಯೆ ಇದೆ ಎಂದು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅವರು ಕ್ರಮಕೈಗೊಳ್ಳುತ್ತಾರೆ.ಗೋಪಾಲಕೃಷ್ಣ ಬೇಳೂರು, ಶಾಸಕ