ಜಿಲ್ಲೆ

ಸನಾತನದ ಆಚಾರ ವಿಚಾರಗಳಿಂದ ವಿಮುಖರಾಗದಿರಿ

ಕಿರಣ್ ಗೌಡ.ಜಿ

ಹುಣಸೂರು: ಬ್ರಾಹ್ಮಣ ಸಮುದಾಯ ಕೇವಲ ತಮ್ಮ ಏಳಿಗೆಯನ್ನು ಮಾತ್ರ ಬಯಸುವವರಲ್ಲ, ಬದಲಾಗಿ ಇಡೀ ಸಮಾಜದ ಸರ್ವತೋಮುಖ ಅಭಿವೃದ್ಧಿಯನ್ನು ಬಯಸುತ್ತದೆ ಎಂದು ನಿವೃತ್ತ ಡಿಇಡಿ ಪ್ರಾಂಶುಪಾಲ ಎಸ್.ಎನ್.ಹೇರಂಭಾರಾವ್ ಅಭಿಪ್ರಾಯಪಟ್ಟರು.

ನಗರದ ಬ್ರಾಹ್ಮಣರ ಬೀದಿಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಸಭಾಂಗಣದಲ್ಲಿ ಭಾನುವಾರ ತಾಲೂಕು ವಿಪ್ರಬಾಂಧವರ ಸೇವಾ ಸಂಘ ಮತ್ತು ವಿಪ್ರ ವನಿತಾ ಸೇವಾ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಸಂಘದ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದರು.

ಬ್ರಾಹ್ಮಣರು ಕೇವಲ ತಮ್ಮ ಶ್ರೇಯೋಭಿವೃದ್ಧಿಗಾಗಿ ಧಾರ್ಮಿಕ ಕಾರ್ಯಗಳನ್ನು ನಡೆಸುವುದಿಲ್ಲ. ಸರ್ವೇ ಜನಾ: ಸುಖಿನೋ ಭವಂತು ಎನ್ನುವ ಮಂತ್ರವೇ ಅವರ ಮುಖ್ಯ ಉದ್ದೇಶವಾಗಿರುತ್ತದೆ. ಸನಾತನ ಧರ್ಮ ಮೂಲ ಆಶಯಗಳನ್ನು ಸಾಂಪ್ರದಾಯಿಕವಾಗಿ ಪಾಲಿಸುತ್ತಾರೆ. ವಿಪರ್ಯಾಸವೆಂದರೆ ಇತ್ತೀಚಿನ ದಿನಗಳಲ್ಲಿ ಬ್ರಾಹ್ಮಣ ಸಮಾಜದ ಯುವಕರು ತಮ್ಮ ಮೂಲ ಆಚಾರ ವಿಚಾರಗಳಿಂದ ವಿಮುಖರಾಗುತ್ತಿದ್ದಾರೆ. ಇದು ಸನಾತನ ಧರ್ಮಕ್ಕೆ ಅಪಚಾರವಾದಂತಾಗುತ್ತದೆ. ದಿನಕ್ಕೆ ಕನಿಷ್ಠ ಎರಡು ಬಾರಿಯಾದರೂ ಸಂಧ್ಯಾವಂದನೆ ಮತ್ತು ಗಾಯತ್ರಿ ಜಪ ಮಾಡುವುದು ಅಗತ್ಯವಾಗಿದೆ. ನಾವು ನಮ್ಮತನವನ್ನು ಮೊದಲು ಕಾಪಾಡಿಕೊಳ್ಳಬೇಕು. ಬ್ರಾಹ್ಮಣರಾದವರು ಮೊದಲು ಬ್ರಾಹ್ಮಣ್ಯ ಮತ್ತು ಚಾತ್ರವನ್ನು ಕಾಪಾಡಿಕೊಂಡಲ್ಲಿ ಮಾತ್ರ ಪ್ರಪಂಚವನ್ನೇ ಗೆಲ್ಲಬಹುದು. ಆ ಮೂಲಕ ಸಮಾಜವನ್ನು ಸರಿದಾರಿಗೆ ತರುವ ಎಲ್ಲ ಅರ್ಹತೆಗಳೂ ಅವನಿಗೆ ಸಿಗುತ್ತದೆ. ಎಲ್ಲರ ಒಳಿತಿಗಾಗಿ ದುಡಿಯೋಣ ಜತೆಯಲ್ಲಿ ನಮ್ಮತವನ್ನೂ ಉಳಿಸಿ ಬೆಳೆಸೋಣವೆಂದರು.

ಅಖಿಲ ಕರ್ನಾಟಕ ವಿಪ್ರವನಿತಾ ಸೇವಾ ಸಂಘದ ಅಧ್ಯಕ್ಷೆ ಕೋಮಲ ಮಂಜುನಾಥ್ ಮಾತನಾಡಿ, ಸಂಘಟನೆಯ ಮೂಲಕ ಮಾತ್ರ ಸಾಧನೆ ಸಾಧ್ಯ. ನಾವೆಲ್ಲರೂ ಒಗ್ಗೂಡಿ ಸಮಾಜದ ಸೇವೆಗೆ ತೊಡಗಬೇಕು. ಮೊದಲಾಗಿ ನಮ್ಮ ಮಕ್ಕಳಿಗೆ ವೇದಾಧ್ಯಾಯನ, ಸಂಸ್ಕೃತ ಭಾಷೆಯ ಅರಿವು, ಸಂಸ್ಕಾರ, ಸಂಸ್ಕೃತಿಗಳ ಪರಿಚಯ ಮಾಡಿಕೊಡಬೇಕು. ಅತ್ಯುನ್ನತ ವಿದ್ಯಾಭ್ಯಾಸದೊಂದಿಗೆ ನಮ್ಮತನವನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಸಂಘದ ಅಧ್ಯಕ್ಷ ಬಿ.ಭಾಸ್ಕರ್ ಭಟ್ ವಹಿಸಿದ್ದರು. ಕಾರ್ಯದರ್ಶಿ ಎಸ್.ಎನ್.ಸುಬ್ರಮಣ್ಯರಾವ್, ತಾಲೂಕು ವಿಪ್ರ ವನಿತಾ ಸೇವಾ ಸಂಘದ ಅಧ್ಯಕ್ಷೆ ಸತ್ಯವತಿ, ಕಾರ್ಯದರ್ಶಿ ಕಮಲಾ, ಕರ್ನಾಟಕ ವಿಪ್ರವನಿತಾ ಸೇವಾ ಸಂಘದ ಉಪಾಧ್ಯಕ್ಷೆ ನಾಗಮಣಿ ವಿಜಯೇಂದ್ರ ರಾವ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮೈಸೂರು ಜಿಲ್ಲೆ ಪ್ರತಿನಿಧಿ ಡಾ.ಲಕ್ಷ್ಮೀದೇವಿ ಮತ್ತು ಸಮಾಜದ ಬಾಂಧವರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಹಂತದ ವ್ಯಾಸಂಗದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. 50 ವಸಂತಗಳನ್ನು ಪೂರೈಸಿದ ದಂಪತಿಗೆ ಗೌರವಿಸಲಾಯಿತು