ಈಶ್ವರ ಖಂಡ್ರೆ ಶಿವಮೊಗ್ಗ ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಅರಣ್ಯ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದರು. ಮಧು ಬಂಗಾರಪ್ಪ, ಬಿ.ವೈ.ರಾಘವೇಂದ್ರ, ಎಸ್.ಎನ್.ಚನ್ನಬಸಪ್ಪ, ಶಾರದಾ ಪೂರ‌್ಯಾನಾಯ್ಕಾ, ಜಿ.ಎಚ್.ಶ್ರೀನಿವಾಸ್, ಡಾ. ಧನಂಜಯ ಸರ್ಜಿ ಮುಂತಾದವರಿದ್ದರು. 
ಜಿಲ್ಲೆ

ಅರಣ್ಯ ನಿವಾಸಿಗಳನ್ನು ಒಕ್ಕಲೆಬ್ಬಿಸಬೇಡಿ

ಅರವಿಂದ ಅಕ್ಲಾಪುರ

ಶಿವಮೊಗ್ಗ: ಅರಣ್ಯ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾಗಿರುವ ಬಹುತೇಕ ಅರ್ಜಿಗಳು ತಿರಸ್ಕೃತಗೊಂಡಿವೆ. ಅವುಗಳನ್ನು ಮರುಪರಿಶೀಲಿಸಬೇಕು. ಅರ್ಜಿದಾರರಿಗೆ ಹಕ್ಕು ಪ್ರತಿಪಾದಿಸಲು ಅವಕಾಶ ನೀಡಬೇಕು. ಈ ಪ್ರಕ್ರಿಯೆಗಳು ಪೂರ್ಣಗೊಳ್ಳುವವರೆಗೂ ಯಾರನ್ನೂ ಒಕ್ಕಲೆಬ್ಬಿಸಬಾರದು ಎಂದು ಅಧಿಕಾರಿಗಳಿಗೆ ಅರಣ್ಯ ಹಾಗೂ ಪರಿಸರ ಸಚಿವ ಈಶ್ವರ ಖಂಡ್ರೆ ಸೂಚಿಸಿದರು.

ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, 2005ರ ಡಿ.13ಕ್ಕೂ ಮುನ್ನ ಅರಣ್ಯವಾಸಿಗಳಾಗಿದ್ದ ಎಲ್ಲ ಬುಡಕಟ್ಟು ನಿವಾಸಿಗಳಿಗೆ, ಜೀವನ ನಿರ್ವಹಣೆಗಾಗಿ ನೆಲೆಸಿದ್ದವರಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಪರಿಹಾರ ಸಿಗಲೇಬೇಕು ಎಂದು ಹೇಳಿದರು.
ಸಾಮಾನ್ಯ ವರ್ಗದ ಜನರು ಮೂರು ತಲೆಮಾರು ಅಂದರೆ 75 ವರ್ಷದ ದಾಖಲೆಗಳನ್ನು ನೀಡಬೇಕು. ಆದರೆ ಇದು ಕಷ್ಟ ಸಾಧ್ಯ. ಬಹುತೇಕ ಅರ್ಜಿಗಳು ತಿರಸ್ಕೃತಗೊಳ್ಳಲು ಇದೂ ಒಂದು ಕಾರಣ. ಹೀಗಾಗಿ 75 ವರ್ಷದ ದಾಖಲೆ ಅವಶ್ಯ ಎಂಬ ಅಂಶಕ್ಕೆ ತಿದ್ದುಪಡಿ ತರಬೇಕೆಂದರು.
1978ರ ಪೂರ್ವದಲ್ಲಿ ಅರಣ್ಯ ಒತ್ತುವರಿ ಮಾಡಿರುವ ಪ್ರಕರಣಗಳ ಪೈಕಿ ಪಟ್ಟಾಭೂಮಿ ಮತ್ತು ಒತ್ತುವರಿ ಎರಡೂ ಸೇರಿ ಮೂರು ಎಕರೆ ಮೀರದವರ ಮತ್ತು ಇದೇ ಭೂಮಿಯನ್ನು ಜೀವನೋಪಾಯಕ್ಕಾಗಿ ಅವಲಂಬಿಸಿರುವವರ ವಿರುದ್ಧ ಕ್ರಮ ಕೈಗೊಳ್ಳದಂತೆ ಸರ್ಕಾರ ಈ ಹಿಂದೆಯೇ ನಿರ್ಧಾರ ಮಾಡಿದೆ. ಮೂರು ಎಕರೆಗಿಂತ ಹೆಚ್ಚು ಒತ್ತುವರಿ ಮಾಡಿರುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ, ಶಾಸಕರಾದ ಶಾರದಾ ಪೂರ‌್ಯಾನಾಯ್ಕಾ, ಆರಗ ಜ್ಞಾನೇಂದ್ರ, ಎಸ್.ಎನ್.ಚನ್ನಬಸಪ್ಪ, ಜಿ.ಎಚ್.ಶ್ರೀನಿವಾಸ್, ವಿಧಾನಪರಿಷತ್ ಸದಸ್ಯರಾದ ಡಾ. ಧನಂಜಯ ಸರ್ಜಿ, ಬಲ್ಕಿಷ್ ಬಾನು, ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್ ದೀಕ್ಷಿತ್, ಸುಭಾಷ್ ಮಲ್ಕಡೆ ಇತರರಿದ್ದರು.