ತುಮಕೂರು: ಚಿತ್ರದುರ್ಗ ಸಂಸದ ಗೋವಿಂದ ಎಂ.ಕಾರಜೋಳ ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ಶಿರಾ ಮತ್ತು ಪಾವಗಡ ತಾಲೂಕುಗಳ ಕೇಂದ್ರ ಪುರಸತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಯಾಗದಂತೆ ಸರ್ಕಾರದ ನಿಯಮಾವಳಿಯನ್ವಯ ಅನರ್ಹ ಬಿಪಿಎಲ್ ಕಾರ್ಡ್ ರದ್ದತಿ ಬಗ್ಗೆ ಮಾಹಿತಿ ನೀಡಬೇಕು. ಜಿಲ್ಲೆಯಲ್ಲಿ 12804 ಅನರ್ಹ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದು ಮಾಡಲಾಗಿದ್ದು. ರದ್ದುಗೊಳಿಸುವ ಸಂದರ್ಭದಲ್ಲಿ ಅರ್ಹ ಪಡಿತರ ಚೀಟಿಗಳು ರದ್ದಾಗದಂತೆ ಎಚ್ಚರವಹಿಸಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 1,71,435 ಫಲಾನುಭವಿಗಳಿಗೆ 18085 ಕ್ವಿಂಟಾಲ್ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ. ಕೃಷಿ ಯಾಂತ್ರೀಕರಣ, ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ, ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಸೇರಿದಂತೆ ಎಲ್ಲ ಕೇಂದ್ರ ಪುರಸತ ಯೋಜನೆಗಳಲ್ಲಿ ಪ್ರಗತಿ ಸಾಧಿಸಲಾಗುತ್ತಿದೆ ಎಂದು ಕೃಷಿ ಜಂಟಿ ನಿರ್ದೇಶಕ ಡಾ.ರಮೇಶ್ ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 5.73 ಲಕ್ಷ ಜಾನುವಾರುಗಳಿದ್ದು, ಶಿರಾ ಮತ್ತು ಪಾವಗಡ ತಾಲೂಕಿನಲ್ಲಿ 97 ಸಾವಿರ ಜಾನುವಾರುಗಳಿವೆ. ಜಿಲ್ಲೆ ಹಾಲು ಉತ್ಪಾದನೆಯಲ್ಲಿ ರಾಜ್ಯಕ್ಕೆ 3ನೇ ಸ್ಥಾನದಲ್ಲಿದ್ದು, 8 ರಿಂದ 10 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಕುರಿ, ಮೇಕೆ, ಹಂದಿ ಸಾಕಣೆಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ ಎಂದು ಪಶುಪಾಲನೆ ಇಲಾಖೆ ಡಿಡಿ ಡಾ.ಗಿರೀಶ್ಬಾಬು ರೆಡ್ಡಿ ಸಭೆಗೆ ಮಾಹಿತಿ ತಿಳಿಸಿದರು.
ಜಿಪಂ ಸಿಇಒ ಜಿ.ಪ್ರಭು ಮಾತನಾಡಿ, ನರೇಗಾ ಯೋಜನೆಯಡಿ ಸಮಗ್ರ ಶಾಲಾ ಅಭಿವೃದ್ಧಿಗಾಗಿ 205 ಕೋಟಿ ರೂ. ವೆಚ್ಚದಲ್ಲಿ 3,614 ಕಾಮಗಾರಿ, ಮೂಲ ಸೌಕರ್ಯಗಳಿಗಾಗಿ 90 ಕೋಟಿ ರೂ. ವೆಚ್ಚದಲ್ಲಿ 1,500 ಕಾಮಗಾರಿ ಹಾಗೂ ಸಮಗ್ರ ವೈಜ್ಞಾನಿಕ ಚರಂಡಿ ವ್ಯವಸ್ಥೆಗಾಗಿ 102 ಕೋಟಿ ರೂ. ವೆಚ್ಚದಲ್ಲಿ 6,170 ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ. ಸಮಗ್ರ ಶಾಲಾ ಅಭಿವೃದ್ಧಿ ಶೀರ್ಷಿಕೆಯಡಿ 1,424 ಶಾಲಾ ಕಾಂಪೌಂಡ್, 1,354 ಶೌಚಗೃಹ, 836 ಆಟದ ಮೈದಾನ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.
ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಹಸರೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಕೃಷಿ, ಅರಣ್ಯೀಕರಣ, ನೆಡುತೋಪು, ಕಂದಕ ನಿಮಾರ್ಣ, ವೃಕ್ಷವನ ನಿಮಾರ್ಣಕ್ಕಾಗಿ 4,723 ಲಕ್ಷ ರೂ.ವೆಚ್ಚದಲ್ಲಿ 2,917 ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.
ಪಾವಗಡ ತಾಲೂಕಿನ ಆಸ್ಪತ್ರೆಗಳಿಗೆ ತಜ್ಞ ವೈದ್ಯರ ಬೇಡಿಕೆಯಿದ್ದು, ತಜ್ಞ ವೈದ್ಯರಿಗೆ 1.50 ಲಕ್ಷ ರೂ.ಗಳ ಸಂಭಾವನೆ ನಿಗದಿಯಾಗಿದೆ. ಸಂಭಾವನೆಯನ್ನು 2.50 ಲಕ್ಷ ರೂ.ಗಳಿಗೆ ನಿಗದಿಪಡಿಸಿದರೆ ತಜ್ಞ ವೈದ್ಯರು ಸೇವೆ ಒದಗಿಸುತ್ತಾರೆ ಎಂದು ಡಿಎಚ್ಒ ಡಾ.ಚಂದ್ರಶೇಖರ್ ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮ ಮತ್ತಿತರರು ಇದ್ದರು.