ಬೇಲೂರು ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ದಾಸೋಹ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಎಚ್.ಕೆ.ಸುರೇಶ್, ಜಿಪಂ ಸಿಇಒ ಪೂರ್ಣಿಮಾ, ಪರಪ್ಪಸ್ವಾಮಿ ಇದ್ದರು. 
ಜಿಲ್ಲೆ

ಅಧಿಕಾರಿಗಳ ಕಾರ್ಯ ದಾಖಲೆಗಳಿಗೆ ಸೀಮಿತವಾಗದಿರಲಿ

ಬೇಲೂರು: ಅಧಿಕಾರಿಗಳು ತಮ್ಮ ಇಲಾಖೆಯ ಪ್ರಗತಿಯನ್ನು ಕೇವಲ ದಾಖಲೆಯಲ್ಲಿ ಮಾತ್ರ ತೋರಿಸದೆ, ಸಮರ್ಪಕವಾದ ಕೆಲಸ ಮಾಡಿ ತೋರಿಸಬೇಕು ಎಂದು ಶಾಸಕ ಎಚ್.ಕೆ.ಸುರೇಶ್ ಸೂಚಿಸಿದರು.

ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ದಾಸೋಹ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಬೇಲೂರು ವಿಧಾನಸಭಾ ಕ್ಷೇತ್ರದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ವಿವಿಧ ಇಲಾಖೆ ಅಧಿಕಾರಿಗಳು ಬೇಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿದ್ದಾರೆ. ಮತ್ತು ಕೇಂದ್ರ ಸ್ಥಾನದಲ್ಲೇ ತಂಗಬೇಕು ಎಂದು ಉಸ್ತುವಾರಿ ಸಚಿವರು ಹೇಳಿದರೂ ಗಮನ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಡಿಸಿದರು.

ಕೆಲವರು ಮೇಲಾಧಿಕಾರಿಗಳಿಗೆ ಲಂಚ ಕೋಡಬೇಕು. ಹಾಗಾಗಿ ನಾವು ಸಾರ್ವಜನಿಕರಿಂದ ಹಣ ಪಡೆಯುತ್ತೇವೆ ಎಂದು ಹೇಳುತಿದ್ದಾರೆ. ಆದರೆ ಯಾವ ಮೇಲಾಧಿಕಾರಿ ನಿಮ್ಮಿಂದ ಹಣ ಕೇಳುತ್ತಿದ್ದಾರೆ ಎಂಬುದನ್ನು ತಿಳಿಸಿ, ಅವರನ್ನು ನಾನು ನೋಡಿ ಕೊಳ್ಳುತ್ತೇನೆ. ಹಣ ಕೇಳುವವರು ಈ ಕ್ಷೇತ್ರದಲ್ಲಿ ಇರುವುದು ಬೇಡ. ಹಳೆಬೀಡಿನ ಪಿಡಿಒ, ಸರ್ಕಾರಿ ಮತ್ತು ಸಿಎ ನಿವೇಶನಗಳನ್ನು ಇ ಸ್ವತ್ತು ಮಾಡಿ ಕೊಟ್ಟಿದ್ದಾರೆ. ಇವರ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಪಂ ಸಿಇಒ ಪೂರ್ಣಿಮಾ ಅವರಿಗೆ ಒತ್ತಾಯಿಸಿದರು.

ಗ್ರಾಮ ಪಂಚಾಯಿತಿಗಳಲ್ಲಿ ವಾಟರ್‌ಮನ್ ಹಾಗೂ ಕಂಪ್ಯೂಟರ್ ಆಪರೇಟರ್‌ಗಳ ದರ್ಬಾರ್ ಹೆಚ್ಚಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಜತೆಗೆ ಅಭಿವೃದ್ಧಿ ಅಧಿಕಾರಿಗಳು ಸರಿಯಾದ ಸಮಯಕ್ಕೆ ಕಚೇರಿಯಲ್ಲಿರದೆ ಸಾರ್ವಜನಿಕರನ್ನು ಅಲೆದಾಡಿಸುತ್ತಾರೆ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿದ್ದು, ಇದು ನಿಲ್ಲಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸುವ ಕೆಲಸ ಮಾಡಿದರೆ ಅಭಿವೃದ್ಧಿಗೆ ಚುರುಕು ಮುಟ್ಟಿಸಬಹುದಾಗಿದೆ. ಗ್ರಾಮೀಣ ಭಾಗದಲ್ಲಿ ಉದ್ಯೋಗ ಖಾತ್ರಿ ಕಾಮಗಾರಿಗಳು ಅಭಿವೃದ್ಧಿಗೆ ಪೂರಕವಾಗಿದ್ದು, ಅಧಿಕಾರಿಗಳು ಇದನ್ನು ಸಮಗ್ರವಾಗಿ ಬಳಸಿಕೊಳ್ಳಬೇಕು. ಇದರಿಂದ ಜನರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಜಿಪಂ ಸಿಇಒ ಪೂರ್ಣಿಮಾ ಮಾತನಾಡಿ, ಬೇಲೂರು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಗತಿಯ ಬಗ್ಗೆ ನನಗೆ ತೃಪ್ತಿ ಇಲ್ಲ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಶೇ.64 ರಷ್ಟು ಮಾತ್ರ ಪ್ರಗತಿಯಾಗಿದೆ. ಆರೋಗ್ಯ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಒತ್ತು ನೀಡಬೇಕು. ಗ್ರಂಥಾಲಯಗಳ ಅಭಿವೃದ್ಧಿಗೆ ಗಮನ ನೀಡಬೇಕಿದೆ. ಅಧಿಕಾರಿ ಮತ್ತು ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಾಗಬೇಕು. ಇ ಸ್ವತ್ತಿನ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಕೆಲ ಅಭಿವೃದ್ಧಿ ಅಧಿಕಾರಿಗಳಿಗೆ ಇ ಸ್ವತ್ತು ಬಗ್ಗೆ ಸಮಸ್ಯೆಗಳು ಬಂದಾಗ ಅದನ್ನು ಹೇಗೆ ಪರಿಹರಿಸಬೇಕೆಂಬ ತಿಳಿವಳಿಕೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಯೋಜನಾಧಿಕಾರಿ ಪರಪ್ಪಸ್ವಾಮಿ, ಜಿಲ್ಲಾ ಅಭಿವೃದ್ಧಿ ಅಧಿಕಾರಿ ಕೃಷ್ಣಮೂರ್ತಿ, ತಾಪಂ ಇಒ ಸತೀಶ್, ಅರಸೀಕೆರೆ ತಾಪಂ ಇಒ ನಾಗರಾಜು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.