ಇಳಕಲ್ಲದಲ್ಲಿ ನಡೆದ ಶಾಂತಿ ಸಮಿತಿ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾತನಾಡಿದರು. ಡಿವೈಎಸ್‌ಪಿ ಪ್ರಭುಗೌಡ, ಪಿಎಸ್‌ಐ ಎಸ್.ಆರ್. ನಾಯಕ, ಅಪರಾಧ ವಿಭಾಗದ ಪಿಎಸ್‌ಐ ಶಾಂತಾ ಹಳ್ಳಿ, ಗ್ರಾಮೀಣ ಠಾಣೆ ಪಿಎಸ್‌ಐ ಲಕ್ಷ್ಮಿಕಾಂತ ಬಾನಿಗೋಳ ಇತರರಿದ್ದರು. 
ಜಿಲ್ಲೆ

ಜಾತ್ರೆಯಲ್ಲಿ ಅಹಿತಕರ ಘಟನೆಗಳಿಗೆ ಆಸ್ಪದ ನೀಡಬೇಡಿ

ದತ್ತಾತ್ರೇಯ ಪಿ ಕುಲಕರ್ಣಿ

ಇಳಕಲ್ಲ: ನಗರದಲ್ಲಿ ಸೆ.11 ರಂದು ನಡೆಯಲಿರುವ ಶ್ರೀ ವಿಜಯಮಹಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವವನ್ನು ಎಲ್ಲರೂ ಸೇರಿ ಶಾಂತಿಯುತವಾಗಿ ಆಚರಿಸೋಣ ಎಂದು ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಹೇಳಿದರು.

ನಗರದ ಪೊಲೀಸ್ ಠಾಣೆ ಆವರಣದಲ್ಲಿ ಗುರುವಾರ ಸಂಜೆ ನಡೆದ ಶಾಂತಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮೂರು ದಿನಗಳವರೆಗೆ ಜಾತ್ರಾ ಮಹೋತ್ಸವ ನಡೆಯಲಿದ್ದು, ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಇಲಾಖೆಯಿಂದ ಬಿಗಿ ಭದ್ರತೆ ಒದಗಿಸಲಾಗುವುದು. ಮದ್ಯದಂಗಡಿಗಳನ್ನು ಬಂದ್ ಮಾಡಿಸಲಾಗುವುದು. ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗುವುದು ಎಂದು ತಿಳಿಸಿದರು.

ಶಾಂತಿ ಸಮಿತಿ ಸದಸ್ಯ ಸಿ.ಸಿ. ಚಂದ್ರಾಪಟ್ಟಣ ಮಾತನಾಡಿ, ಎರಡು ದಿನಗಳ ಮುಂಚೆಯೇ ಮದ್ಯದ ಅಂಗಡಿಗಳನ್ನು ಬಂದ್ ಮಾಡಿಸಬೇಕು. ಬೇರೆ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಜಾತ್ರೆಗೆ ಆಗಮಿಸಲಿದ್ದಾರೆ. ಜಾತ್ರೆಯಲ್ಲಿ ಕಳ್ಳತನವಾಗುವ ಸಾಧ್ಯತೆಗಳಿದ್ದು, ಪೊಲೀಸ್ ಸಿಬ್ಬಂದಿ ಗಮನಹರಿಸಬೇಕು ಎಂದರು.

ನಗರಸಭೆ ಮಾಜಿ ಅಧ್ಯಕ್ಷ ಲಕ್ಷ್ಮಣ ಗುರಂ ಮಾತನಾಡಿದರು. ಮಹಾಂತಗೌಡ ಪಾಟೀಲ, ಶಂಕರ ತೋಟದ, ಅಹ್ಮದಸಾಬ ಕಂಡಕ್ಟರ್, ಮಹಾಂತೇಶ ಚನ್ನಿ, ನಾರಾಯಣಪ್ಪ ಚಿಲ್ಲಾಳ, ಮಂಜುನಾಥ ಹೊಸಮನಿ, ಹನುಮಂತ ತುಂಬದ, ಪುರುಷೋತ್ತಮ ದರಕ, ಚಂದ್ರಶೇಖರ ಏಕಬೋಟೆ, ಮಹಾಂತೇಶ ಮಡಿವಾಳರ ಮಾತನಾಡಿದರು.

ಡಿವೈಎಸ್‌ಪಿ ಪ್ರಭುಗೌಡ, ಪಿಎಸ್‌ಐ ಎಸ್.ಆರ್. ನಾಯಕ್, ಅಪರಾಧ ವಿಭಾಗದ ಪಿಎಸ್‌ಐ ಶಾಂತಾ ಹಳ್ಳಿ, ಗ್ರಾಮೀಣ ಠಾಣೆಯ ಪಿಎಸ್‌ಐ ಲಕ್ಷ್ಮಿಕಾಂತ ಬಾನಿಗೋಳ ಇದ್ದರು. ಜಿಲ್ಲಾ ನೂತನ ವರಿಷ್ಠಾಧಿಕಾರಿಗಳಿಗೆ ಪದಾಧಿಕಾರಿಗಳು ಹಾಗೂ ಹಿರಿಯರು ಹೂಗುಚ್ಛ ನೀಡಿ ಸ್ವಾಗತಿಸಿದರು.