ಜಿಲ್ಲೆ

ಹಿಂದು ಸಮಾಜ ಒಡೆಯಲು ಆಸ್ಪದ ಕೊಡಬೇಡಿ

ಮರಿದೇವ ಹೂಗಾರ

ಹುಬ್ಬಳ್ಳಿ: ಆರ್​ಎಸ್​ಎಸ್ ಭಾರತ ಮಾತೆಯ ಸಂರಕ್ಷಣೆ ಮಾಡುವ ಸಜ್ಜನ ಸಂಘಟನೆ. ಹಿಂದು ಧರ್ಮ, ಸಂಸ್ಕೃತಿ, ಸಮಾಜ ರಕ್ಷಣೆ ಮಾಡುತ್ತಿದೆ. ಆದರೆ, ಕೆಲವರು ಹಿಂದು ಸಮಾಜದೊಳಗಿರುವ ಜಾತಿಯನ್ನು ಜೈಭೀಮ್ ಎನ್ನುವ ಹೆಸರಿನ ಮೂಲಕ ಬೇರ್ಪಡಿಸುವ ಕೆಲಸ ಮಾಡುತ್ತಿದ್ದಾರೆ. ಒಗ್ಗೂಡಿರುವ ಸಮಾಜವನ್ನು ವಿಘಟಿಸುವುದಕ್ಕೆ ಯಾರೂ ಆಸ್ಪದ ಕೊಡಬಾರದು ಎಂದು ಆರ್​ಎಸ್​ಎಸ್​ನ ಕರ್ನಾಟಕ ಉತ್ತರ ಪ್ರಾಂತ ಸಂಪರ್ಕ ಪ್ರಮುಖ ಸುಧೀರಸಿಂಗ್ ಘೊರ್ಪಡೆ ಹೇಳಿದರು.

ವಿಜಯದಶಮಿ ನಿಮಿತ್ತ ಆರ್​ಎಸ್​ಎಸ್​ನ ಪಥ ಸಂಚಲನದ ಬಳಿಕ ನಗರದ ನೆಹರು ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ಸಾರ್ವಜನಿಕ ಸಮಾರಂಭದಲ್ಲಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಪೂರ್ವದಲ್ಲಿಯೂ ಸಂಘದ ಕಾರ್ಯಚಟುವಟಿಕೆ ಜನಮನ ಸೆಳೆದಿವೆ. ಸ್ವಾತಂತ್ರ್ಯ ನಂತರವೂ ಅನೇಕ ಸಂಕಷ್ಟಗಳನ್ನು ಸಂಘ ಎದುರಿಸಿದೆ. ಹಿಂದು ಧರ್ಮ ಮತ್ತು ಭಾರತ ಮಾತೆಯ ಸಂರಕ್ಷಣೆಗೆ ಕಟಿಬದ್ಧವಾಗಿದೆ. ಅನೇಕ ಆಂದೋಲನಗಳ ಮೂಲಕವೂ ಸಂಘ ಗಮನ ಸೆಳೆದಿದೆ ಎಂದರು.

ಇಸ್ರೇಲ್-ಪ್ಯಾಲೆಸ್ತೇನ್ ಯುದ್ಧ ನಡೆದಾಗ ಭಾರತದೊಳಗಿನ ಕೆಲವರು ಪ್ಯಾಲೆಸ್ತೇನ್​ಗೆ ಬೆಂಬಲಿಸಿದರು. ಪರೋಕ್ಷವಾಗಿ ಹಮಾಸ್ ಉಗ್ರ ಸಂಘಟನೆಗೆ ಬೆನ್ನೆಲುಬಾದರು. ಉಗ್ರರಿಗೆ ಪ್ರೋತ್ಸಾಹ ಕೊಡುವವರು ನಮ್ಮ ದೇಶದೊಳಗೆ ಇರುವುದು ಖೇದಕರ. ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಸರ್ಕಾರವು ಉಗ್ರರನ್ನು ಮಟ್ಟ ಹಾಕುವುದಕ್ಕೆ ಕಠಿಣ ಕ್ರಮ ಕೈಗೊಂಡಿದೆ ಎಂದರು.

ಅಂಗವಿಕಲ ಕ್ರೀಡಾಪಟುಗಳ ರಾಷ್ಟ್ರೀಯ ತರಬೇತುದಾರ ಶಿವಾನಂದ ಗುಂಜಾಳ ಮಾತನಾಡಿ, ಆರ್​ಎಸ್​ಎಸ್ ಶಿಸ್ತು ಬದ್ಧ ಸಂಘಟನೆ. ಸಂಘದ ಚಟುವಟಿಕೆಗಳು ಬಹಳಷ್ಟು ಜನರ ಗಮನ ಸೆಳೆಯುತ್ತದೆ. ಸಮಯ ಪಾಲನೆಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಸನಾತನ ಧರ್ಮಕ್ಕೆ ಗೌರವ ಸಿಗುವ ಕೆಲಸ ಮಾಡುತ್ತಿದೆ ಎಂದರು.

ವ್ಯಾಪಾರಿ ಕಿರಣ ಗುಡ್ಡದಕೇರಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಮಹೇಶ ಟೆಂಗಿನಕಾಯಿ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ವಿಎಕೆ ಫೌಂಡೇಷನ್ ಅಧ್ಯಕ್ಷ ವೆಂಕಟೇಶ ಕಾಟವೆ, ಪ್ರಮುಖರಾದ ಚನ್ನು ಹೊಸಮನಿ, ಡಿ.ಕೆ. ಚವ್ಹಾಣ, ರಂಗಾ ಬದ್ದಿ, ದತ್ತಮೂರ್ತಿ ಕುಲಕರ್ಣಿ ಇತರರು ಇದ್ದರು.

ಆಕರ್ಷಕ ಪಥ ಸಂಚಲನ: ಆರ್​ಎಸ್​ಎಸ್ ಗಣವೇಷಧಾರಿಗಳು, ನೆಹರು ಮೈದಾನದಿಂದ ನಗರದ ವಿವಿಧೆಡೆ ಆಕರ್ಷಕ ಪಥ ಸಂಚಲನ ನಡೆಸಿದರು. ದಾರಿಯುದ್ದಕ್ಕೂ ಮಹಿಳೆಯರು ರಂಗೋಲಿ ಬಿಡಿಸಿದ್ದರು. ಜನರು ಗಣವೇಷಧಾರಿಗಳ ಮೇಲೆ ಹೂಮಳೆಗೈದರು. ಮಕ್ಕಳು ರಾಷ್ಟ್ರನಾಯಕರ ವೇಷ ಧರಿಸಿ, ಗಣವೇಷಧಾರಿಗಳನ್ನು ಸ್ವಾಗತಿಸಿದರು. ನಂತರ ನೆಹರು ಮೈದಾನಕ್ಕೆ ಆಗಮಿಸಿದ ಗಣವೇಷಧಾರಿಗಳು, ಶಾರೀರಿಕ ಕವಾಯತು ಪ್ರದರ್ಶನ ನೀಡಿದರು.