Dr K Sudhakar, Medical Education Minister addressing press regarding Arogya Sethu App and Covid-19 lockdown, Coronavirus at Vidhana Soudha in Bengaluru on Thursday, 21 May 2020. Photo by S K Dinesh 
ಜಿಲ್ಲೆ

ಲಕ್ಷಣರಹಿತರನ್ನು ದಾಖಲಿಸಬೇಡಿ: ಖಾಸಗಿ ಆಸ್ಪತ್ರೆಗಳಿಗೆ ಸಚಿವ ಡಾ. ಕೆ. ಸುಧಾಕರ್ ಸೂಚನೆ

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ಕರೊನಾ ಲಕ್ಷಣವಿಲ್ಲದ ಅಥವಾ ಅಲ್ಪ ಲಕ್ಷಣವುಳ್ಳವರನ್ನು ಆಸ್ಪತ್ರೆಗಳಿಗೆ ದಾಖಲಿಸಿಕೊಳ್ಳಬಾರದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಿದ್ದಾರೆ.

ರೋಗಿಗಳನ್ನು ಕೋವಿಡ್ ಕೇರ್ ಸೆಂಟರ್ ಅಥವಾ ಹೋಂ ಐಸೋಲೇಷನ್ ಮಾಡುವ ನಿಟ್ಟಿನಲ್ಲಿ ಸರ್ಕಾರ ಹೊರಡಿಸಿರುವ ಸುತ್ತೋಲೆಯನ್ನು ಪಾಲಿಸಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.

ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಸಿಎಂ ಚರ್ಚೆ ನಡೆಸಿದ್ದು, ಒಂದು ವಾರದೊಳಗೆ ಹೆಚ್ಚುವರಿ 3,000 ಹಾಸಿಗೆಗಳು ಸೇರ್ಪಡೆಯಾಗಲಿವೆ ಎಂದರು.

ಮುಖ್ಯಮಂತ್ರಿ ಕರೆದಿದ್ದ ಸಭೆಗೆ ಗೈರಾಗಿರುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕರೊನಾ ಮತ್ತು ಕರೊನೇತರ ಕಾಯಿಲೆಗಳಿಗೆ ಚಿಕಿತ್ಸೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧವೂ ಕಠಿಣ ಕಾನೂನು ಕ್ರಮ ಅನಿವಾರ್ಯ ಎಂದು ಸಚಿವರು ಹೇಳಿದರು.

ರಾಜ್ಯದಲ್ಲಿ ಈಗ 85 ಕರೊನಾ ಲ್ಯಾಬ್​ಗಳಿದ್ದು ಮುಂದಿನ ದಿನಗಳಲ್ಲಿ ಇನ್ನೂ 25 ಲ್ಯಾಬ್ ಸ್ಥಾಪಿಸುವ ಚಿಂತನೆ ಇದೆ. ಮುಂದಿನ ದಿನಗಳಲ್ಲಿ 50,000 ಆರ್​ಟಿಪಿಸಿಆರ್ ಟೆಸ್ಟ್​ಗಳನ್ನು ಪ್ರತಿದಿನ ನಡೆಸುವ ಗುರಿ ಹೊಂದಲಾಗಿದೆ. ಇದುವರೆಗೆ 9.8 ಲಕ್ಷ ಟೆಸ್ಟ್ ನಡೆಸಲಾಗಿದ್ದು ಕೆಲವೇ ರಾಜ್ಯಗಳು ನಮಗಿಂತ ಹೆಚ್ಚು ಟೆಸ್ಟ್ ನಡೆಸಿವೆ ಎಂದರು.

ರಾಜ್ಯದಲ್ಲಿ 300 ಜನರಿಗೆ ಟೆಸ್ಟ್ ಮಾಡಲಾಗುತ್ತಿದೆ. ಇನ್ನೂ 10 ಲಕ್ಷ ಆಂಟಿಜೆನ್ ಕಿಟ್​ಗಳಿಗೆ ಆರ್ಡರ್ ನೀಡಲಾಗಿದೆ. ಟೆಸ್ಟ್ ನಡೆಸುವಲ್ಲಿ ಮೊದಲ 10 ರಾಜ್ಯಗಳಲ್ಲಿ ಕರ್ನಾಟಕವೂ ಒಂದು ಎಂದು ಸುಧಾಕರ್ ತಿಳಿಸಿದರು.

ಮಕ್ಕಳ ಆರೋಗ್ಯ ಕಾಪಾಡಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳೆರಡೂ ಬದ್ಧವಾಗಿವೆ. ಶಾಲೆಗಳನ್ನು ತೆರೆದರೆ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ಈಗಲೇ ಶಾಲೆ ಆರಂಭಿಸುವುದಿಲ್ಲ. | ಡಾ.ಕೆ.ಸುಧಾಕರ್ ವೈದ್ಯಕೀಯ ಶಿಕ್ಷಣ ಸಚಿವ