ಜಿಲ್ಲೆ

ಹೆಚ್ಚು ಲಾಭ ಗಳಿಸುವ ಕೆಲಸ ಮಾಡಲಿ

ವೀರೇಶ ಸೌದ್ರಿ

ಮುಂಡಗೋಡ: ಪ್ರತಿಯೊಂದು ವಿಭಾಗದ ಸಿಬ್ಬಂದಿಯು ಸಂಸ್ಥೆ ನಮ್ಮದು ಎಂಬ ಮನೋಭಾವದಿಂದ ಕೆಲಸ ನಿರ್ವಹಿಸಿ ಹೆಚ್ಚು ಲಾಭವನ್ನು ತಂದು ಕೊಡುವ ಕೆಲಸವನ್ನು ಮಾಡಬೇಕು ಎಂದು ಮಾಜಿ ಶಾಸಕ ವಿ.ಎಸ್. ಪಾಟೀಲ ಹೇಳಿದರು.

ಪಟ್ಟಣದ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ 2023-24ನೇ ಸಾಲಿನ 67ನೇ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು. ಹಿರಿಯರು ಸ್ಥಾಪಿಸಿದ ಈ ಸಹಕಾರಿ ಸಂಘ ತಾಲೂಕಿನಲ್ಲಿ ತನ್ನದೆಯಾದ ಮಹತ್ವ ಹೊಂದಿದೆ. ಸಂಘ ಹೆಚ್ಚು ಲಾಭ ಹೊಂದಲು ಸಿಬ್ಬಂದಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕು ಎಂದರು.

ಸಂಸ್ಥೆಯ ಆವರಣದಲ್ಲಿರುವ ಅಕ್ಕಿಮಿಲ್‌ನಿಂದ ಸಂಘಕ್ಕೆ ಲಾಭವಾಗುತ್ತಿಲ್ಲ. ಅದನ್ನು ಬೇರೆಯವರಿಗೆ ಬಾಡಿಗೆ ನೀಡುವಂತೆ ಸೂಚಿಸಿದ ಅವರು, ಎಲ್ಲ ರೈತರು ಈ ಸಂಘದಿಂದಲೇ ಕೃಷಿ ಪರಿಕರಗಳನ್ನು ಖರೀದಿಸಬೇಕು ಎಂದರು.

ಕೆಡಿಸಿಸಿ ಬ್ಯಾಂಕ್ ನಿರ್ದೆಶಕ ಎಲ್.ಟಿ. ಪಾಟೀಲ ಮಾತನಾಡಿ, ರೈತರು ಸೇರಿ ಸಂಸ್ಥೆಯನ್ನು ಕಟ್ಟಿದ್ದಾರೆ. ಈ ಹಿಂದೆ ಸಂಸ್ಥೆ ನಷ್ಟದತ್ತ ಸಾಗಿತ್ತು. ಇದೀಗ ಲಾಭದತ್ತ ಹೆಜ್ಜೆ ಹಾಕಿರುವುದು ಸಂತಸದ ಸಂಗತಿ ಎಂದರು.

ಸಂಸ್ಥೆಯ ಅಧ್ಯಕ್ಷ ಚೇತನ ನಾಯ್ಕ ಮಾತನಾಡಿ, 2023-24ನೇ ಸಾಲಿಗೆ ಸಂಸ್ಥೆ 19,53,585ರೂಪಾಯಿ ಲಾಭ ಗಳಿಸಿದೆ. ಈ ಸಂಸ್ಥೆ ತಾಲೂಕಿನ ರೈತರದು. ನಾವೆಲ್ಲರೂ ಸೇರಿ ಹೆಚ್ಚಿನ ಲಾಭ ಹೊಂದುವಂತೆ ಮಾಡೋಣ ಎಂದರು.

ಸಂಘದ ಸದಸ್ಯರಾದ ಸುನೀಲ ವೇರ್ಣೆಕರ, ಸಂತೋಷ ಬೋಸ್ಲೆ, ಪರಶುರಾಮ ತಹಶೀಲ್ದಾರ್, ಉಮೇಶ ಗಾಣಿಗೇರ, ತಿರುಪತಿ ವಡ್ಡರ, ಅಲೆಹಸನ ಬೇಂಡಿಗೇರಿ, ಮಂಜುನಾಥ ಪಾಟೀಲ, ಕಮಲವ್ವ ಹಂಚಿನಮನಿ, ಬಿ.ಕೆ. ಪಾಟೀಲ, ಮಾಲಾ ಬನವಾಸಿ, ಫಕೀರಪ್ಪ ಚಳಮಟ್ಟಿ, ನಾಗಪ್ಪ ತಳವಾರ, ಕೃಷ್ಣ ವಡ್ಡರ, ವ್ಯವಸ್ಥಾಪಕ ಮಂಜುನಾಥ ರಾವಳೆಕರ ಇತರರಿದ್ದರು.