ಜಿಲ್ಲೆ

ಸರ್ಕಾರಿ ಕೆಲಸ ಪ್ರಾಮಾಣಿಕವಾಗಿ ಮಾಡಿ

ಸೋಮನಾಥ ರೆಡ್ಡಿ

ನರಗುಂದ: ಸರ್ಕಾರಿ ಕೆಲಸ ಮಾಡಿಕೊಡಲು ಯಾರಾದರೂ ಹಣ ಕೇಳಿದರೆ ಅಂಥವರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಬೇಕು. ನಿರ್ಗತಿಕರು, ವಯೋವೃದ್ಧರನ್ನು ವಿನಾಕಾರಣ ಕಚೇರಿಗೆ ಅಲೆದಾಡಿಸದೆ ಪಿಂಚಣಿ ಸೌಲಭ್ಯ ಒದಗಿಸಿಕೊಡಲು ಪ್ರಾಮಾಣಿಕವಾಗಿ ಕ್ರಮ ಕೈಗೊಳ್ಳಬೇಕು ಎಂದು ಲೋಕಾಯುಕ್ತ ಡಿವೈಎಸ್ಪಿ ವಿಜಯ ಬಿರಾದಾರ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಾರ್ವಜನಿಕರ ಕುಂದುಕೊರತೆ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಪಾಮ್ ಆಯಿಲ್ ಆರೋಗ್ಯಕ್ಕೆ ಒಳೆಯದಲ್ಲವೆಂದು ಆರೋಗ್ಯ ಇಲಾಖೆ ಧೃಡಪಡಿಸಿದೆ. ಆದರೆ, ತೋಟಗಾರಿಕೆ ಇಲಾಖೆಯಿಂದ ಈ ಎಣ್ಣೆ ಗಿಡಗಳನ್ನು ಬೆಳೆಸಲು ಸಬ್ಸಿಡಿ ರೂಪದಲ್ಲಿ ರೈತರನ್ನು ಉತ್ತೇಜಿಸುತ್ತಿರುವುದು ಸರಿಯಾದ ಕ್ರಮವಲ್ಲ. ರೈತರಿಗೆ ಯಾವ ಬೆಳೆ ಬೆಳೆಯಬೇಕೆಂಬುದನ್ನು ಇಲಾಖೆ ಅಧಿಕಾರಿಗಳು ಮನದಟ್ಟು ಮಾಡಿಕೊಡಬೇಕು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನ ರಡ್ಡೇರ ನಾಗನೂರ ಸರ್ಕಾರಿ ಶಾಲೆಯ ಎಸ್‌ಡಿಎಂಸಿ ಅಧಿಕಾರವಧಿ ಮುಗಿದು ನಾಲ್ಕೈದು ವರ್ಷಗಳಾಗಿದ್ದರೂ ಇನ್ನೂ ಎಸ್‌ಡಿಎಂಸಿ ರಚನೆಯಾಗಿಲ್ಲ. ತಕ್ಷಣವೇ ಎಸ್‌ಡಿಎಂಸಿ ರಚಿಸುವಂತೆ ಬಿಇಒ ಡಾ.ಗುರುನಾಥ ಹೂಗಾರ ಅವರಿಗೆ ತಿಳಿಸಿದರು.

ಅಂಗನವಾಡಿಗಳಲ್ಲಿ ಸರಿಯಾಗಿ ಮಕ್ಕಳ ಆಟಿಕೆ ಸಾಮಗ್ರಿಗಳು ದೊರೆಯುತ್ತಿಲ್ಲ. ನಿಗಧಿತ ಅವಧಿಯಲ್ಲಿ ಅಂಗನವಾಡಿ ಮೇಲ್ವಿಚಾರಕರು ಸರಿಯಾಗಿ ಅಂಗನವಾಡಿಗಳ ಪರಿಶೀಲನೆ ನಡೆಸುತ್ತಿಲ್ಲ ಎನ್ನುವ ದೂರುಗಳಿವೆ. ಹೀಗಾಗಿ ಆಯಾ ಅಂಗನವಾಡಿಗಳನ್ನು ಪರಿಶೀಲನೆಮಾಡಿ ಸಮಸ್ಯೆ ಪರಿಹರಿಸಲು ಸಿಡಿಪಿಒ ಕಮಲಾ ಹುಲಕೋಟಿಯವರಿಗೆ ಡಿವೈಎಸ್‌ಪಿ ತಿಳಿಸಿದರು.

ಕೆಲ ದಿನಗಳ ಹಿಂದೆ ತಾಲೂಕಿನ ಬನಹಟ್ಟಿಯಲ್ಲಿ ಹಿಂದುಳಿದ ವರ್ಗದ ಜನಾಂಗ ಮತ್ತು ಸರ್ವಣಿಯರ ನಡುವೆ ಗಲಾಟೆಯಾಗಿದೆ. ಹಿಂದುಳಿದ ವರ್ಗದ ಮೂವರು ವಿದ್ಯಾರ್ಥಿಗಳನ್ನು ಅಲ್ಲಿಯ ಗ್ರಾಪಂ ಕಚೇರಿಯಲ್ಲಿ ಮತ್ತು ಗ್ರಾಪಂ ಎದುರಿನ ಧ್ವಜಸ್ಥಂಬಕ್ಕೆ ಕಟ್ಟಿ ಇನ್ನುಳಿದ ಜನಾಂಗದವರು ಥಳಿಸಿದ್ದಾರೆ. ಆದರೆ, ಹಿಂದುಳಿದ ವರ್ಗದವರು ಗ್ರಾಪಂ ಸಿಬ್ಬಂದಿ ಮತ್ತು ಕೆಲ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳುತ್ತಿಲ್ಲವೆಂದು ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೂ ಆವರ ಮೇಲೆ ಕ್ರಮಕ್ಯಗೊಂಡಿಲ್ಲವೆಂದು ದಲಿತರು ದೂರು ನೀಡಿದ್ದಾರೆ. ಡಿವೈಎಸ್‌ಪಿ ಅವರೊಂದಿಗೆ ಚರ್ಚಿಸಿ ದೂರು ಸ್ವೀಕರಿಸುವಂತೆ ತಿಳಿಸಲಾಗುವುದು ಎಂದು ಡಿವೈಎಸ್‌ಪಿ ಬಿರಾದಾರ ಹೇಳಿದರು.

ಗ್ರೇಡ್-2 ತಹಸೀಲ್ದಾರ್ ಪರಶುರಾಮ ಕಲಾಲ, ಲೋಕಾಯುಕ್ತ ಇನ್ಸ್‌ಪೆಕ್ಟರ್ ಪರಮೇಶ್ವರ ಕವಟಗಿ, ಯು.ಎನ್. ಸಂಗನಾಳ, ಸಂಗಪ್ಪ ನೈನಾಪೂರ, ಮುತ್ತು ಬಾರಡ್ಡಿ, ಬಿ.ಎಂ. ಬಡಿಗೇರ, ಡಾ. ಗುರುನಾಥ ಹೂಗಾರ, ತಾಲೂಕು ಆರೋಗ್ಯ ಇಲಾಖೆ ಅಧಿಕಾರಿ ಡಾ. ರೇಣುಕಾ ಕೊರವನವರ, ಡಿ.ಬಿ. ಪಠಾಣ, ರಾಘವೇಂದ್ರ ಸಜ್ಜನ, ಮಹೇಶ ಓಲೇಕಾರ, ಪೂಜಾ ಶಿಂಧೆ, ಕೃಷ್ಣಮ್ಮ ಹಾದಿಮನಿ, ಪ್ರಭು ಹುನಗುಂದ, ಪಿಎಸ್‌ಐ ಎಫ್.ಎಸ್. ಮಣ್ಣೂರ, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ಸಾರ್ವಜನಿಕರಿಂದ 11 ಅರ್ಜಿಗಳನ್ನು ಸ್ವೀಕರಿಸಲಾಯಿತು.