ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಫಲಿತಾಂಶ ಅಥವಾ ಪರಿಣಾಮ ನೋಡಿ ಕೆಲಸ ಮಾಡಬಾರದು. ಪರಿಸರ ಸಂರಕ್ಷಣೆಯ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತ ಹೋಗಬೇಕು. ಉತ್ತಮ ಫಲಿತಾಂಶ ಬಂದೇ ಬರುತ್ತದೆ ಎಂದು ಲೇಕ್ ಮ್ಯಾನ್ ಆಫ್ ಇಂಡಿಯಾ ಖ್ಯಾತಿಯ ಆನಂದ ಮಲ್ಲಿಗವಾಡ ಹೇಳಿದರು.
ಹುಬ್ಬಳ್ಳಿ ತೋಳನ ಕೆರೆ ಉದ್ಯಾನದಲ್ಲಿ ವಸುಂಧರಾ ಫೌಂಡೇಷನ್ ವತಿಯಿಂದ ಭಾನುವಾರ ಆಯೋಜಿಸಿದ್ದ ಪರಿಸರ ಸಂರಕ್ಷಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರಿಸರ ಸಂರಕ್ಷಣೆ ಯಾರು ಮಾಡಬೇಕು ಎಂಬ ಪ್ತಶ್ನೆ ಬಂದಾಗ ‘ನಾನು ಮಾಡುತ್ತೇನೆ’ ಎನ್ನುವ ಮನೋಭಾವನೆ ಯಾವಾಗ ಪ್ರತಿಯೊಬ್ಬರಲ್ಲಿ ಬರುತ್ತದೆಯೇ ಆಗ ಪರಿಸರ ಸಂರಕ್ಷಣೆಯಾಗುತ್ತದೆ ಎಂದರು.
ಪರಿಸರ ಸಂರಕ್ಷಣೆಗೆ ನಾವು ಹೆಚ್ಚು ಹೆಚ್ಚು ಗಿಡಗಳನ್ನು ನೆಡಬೇಕು. ನೀರನ್ನು ಪೆಟ್ರೋಲ್ ರೀತಿ ಬಳಸಬೇಕು. ಪ್ರತಿಯೊಬ್ಬರೂ ಮಳೆ ನೀರು ಕೊಯ್ಲು ಮಾಡಬೇಕು. ಏಕ ಬಳಕೆ ಪ್ಲಾಸ್ಟಿಕ್ ಉಪಯೋಗವನ್ನು ಕೈಬಿಡಬೇಕು. ಇಲ್ಲದೆ ಹೋದರೆ ಮುಂಬರುವ ದಿನಗಳಲ್ಲಿ ಭಯಾನಕ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದರು.
ಮೇಯರ್ ವೀಣಾ ಬರದ್ವಾಡ, ಸಂಪನ್ಮೂಲದ ವ್ಯಕ್ತಿಗಳಾದ ಪಿ.ವಿ ಹಿರೇಮಠ, ಗ್ರೀನ್ ಕರ್ನಾಟಕ ಅಸೋಸಿಯೇಷನ್ ಅಧ್ಯಕ್ಷ ಚನ್ನು ಹೊಸಮನಿ, ವೀರೇಶ ಅರಕೇರಿ ಪರಿಸರ ಸಂರಕ್ಷಣೆಯ ಕುರಿತು ಮಾತನಾಡಿದರು. ವಸುಂಧರಾ ಫೌಂಡೇಶನ್ ಅಧ್ಯಕ್ಷ ಮೇಘರಾಜ ಕೆರೂರ, ಗೋವಿಂದಪ್ಪ ಗೌಡಪ್ಪಗೋಳ, ಮಾರುತಿ ಬೀಳಗಿ, ಡಾ. ರಮೇಶ ಮಹಾದೇವಪ್ಪನವರ, ವಿ ಕೇರ್ ಫೌಂಡೇಷನ್ ಅಧ್ಯಕ್ಷ ಗಂಗಾಧರ ಗುಜಮಾಗಡಿ, ವಿನಾಯಕ ನಾಯ್ಕರ, ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಹಸಿರು ಯೋಧರನ್ನು ಸನ್ಮಾನಿಸಲಾಯಿತು. ಮಾಧುರಿ ನಿರೂಪಿಸಿದರು.