ಮಡಿಕೇರಿ:
ಅಭಿವೃದ್ಧಿ ಕಾರ್ಯಗಳೆಂದರೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅಥವಾ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದಷ್ಟು ಸುಲಭವಲ್ಲ. ಈಗ ಅವಕಾಶ ಸಿಕ್ಕಿದೆ, ಅಭಿವೃದ್ಧಿ ಕೆಲಸಗಳನ್ನು ಮಾಡಿ ತೋರಿಸಿ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಲಕ್ಷ್ಮಣ್ ಸವಾಲು ಹಾಕಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ಹೋದಲ್ಲಿ, ಬಂದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷವನ್ನು ಟೀಕೆ ಮಾಡುತ್ತಾ ತಿರುಗಾಡುತ್ತಿದ್ದರು. ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ ಎಂದು ಆರೋಪ ಮಾಡುತ್ತಿದ್ದರು. ಆದರೆ ಈಗ ಅವರದೇ ಎನ್‌ಡಿಎ ಮೈತ್ರಿಕೂಟ ಅಧಿಕಾರದಲ್ಲಿದೆ. ಕೇಂದ್ರದಲ್ಲಿ ಮಹತ್ವದ ಕ್ಯಾಬಿನೆಟ್ ಸಚಿವ ಸ್ಥಾನವೂ ಸಿಕ್ಕಿದೆ. ಕಾವೇರಿ ನೀರು ಹಂಚಿಕೆ, ಮೇಕೆದಾಟು, ಮಹದಾಯಿ ಕಳಸ ಬಂಡೂರಿ, ಅಲಮಟ್ಟಿ ಅಣೆಕಟ್ಟು ಎತ್ತರ, ಪಾರಂಪರಿಕ ಅರಣ್ಯ ಹಕ್ಕು ಕಾಯಿದೆ, ಕಸ್ತೂರಿ ರಂಗನ್ ವರದಿ, ರಾಜ್ಯದ ಜಿಎಸ್‌ಟಿ ಪಾಲು, ರಾಜ್ಯಕ್ಕೆ ಬರ ಪರಿಹಾರ, ರೈತರ ಸಾಲ ಮನ್ನಾ, ಕೊಡಗಿಗೆ ಬೃಹತ್ ಕೈಗಾರಿಕೆ ಹೀಗೆ ತಮ್ಮ ಅವಧಿಯಲ್ಲಿ ಇವುಗಳಲ್ಲಿ ಒಂದನ್ನಾದರೂ ಪರಿಹರಿಸಿಕೊಡಿ ಸಾಕು. ಪಕ್ಷಬೇಧ ಮರೆತು ಸಹಕರಿಸಲಾಗುವುದು ಎಂದು ಮಂಗಳವಾರ ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕೇಂದ್ರದ ಎನ್‌ಡಿಎ ಸರ್ಕಾರದಲ್ಲಿ ರಾಜ್ಯಕ್ಕೆ ೫ ಮಂತ್ರಿ ಸ್ಥಾನ ಸಿಕ್ಕಿದೆ. ಇವರಿಗೆ ಎಲ್ಲಾ ಸಮುದಾಯದವರು ಮತ ಹಾಕಿದ್ದರೂ ಎಸ್‌ಸಿ, ಎಸ್‌ಟಿ, ಒಬಿಸಿ ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕೆ ರಾಜ್ಯದಲ್ಲಿ ಪ್ರಾತಿನಿಧ್ಯ ಇಲ್ಲ. ಕೇಂದ್ರ ಸಂಪುಟದಲ್ಲಿ ೨೧ ಬ್ರಾಹ್ಮಣರಿಗೆ ಸ್ಥಾನ ಕೊಡಲಾಗಿದೆ. ಶೇ.೨ರಷ್ಟು ಇರುವ ಬ್ತಾಹ್ಮಣ ಸಮುದಾಯಕ್ಕೆ ಸಂಪುಟದಲ್ಲಿ ಶೇ. ೩೫ರಷ್ಟು ಪ್ರಾತಿನಿಧ್ಯ ಕೊಡಲಾಗಿದೆ. ಸಾಮಾಜಿಕ ನ್ಯಾಯವನ್ನು ಇಲ್ಲಿ ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ. ಆದರೆ ಕಾಂಗ್ರೆಸ್ ಎಂದಿಗೂ ಸಾಮಾಜಿಕ ನ್ಯಾಯದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಪಕ್ಷ ಎಂದು ಹೇಳಿದರು.
ತಮ್ಮ ವಿರುದ್ಧ ಗೆದ್ದಿರುವ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಅವರಿಗೆ ಅಭಿನಂದನೆಗಳನ್ನು ತಿಳಿಸುವುದಾಗಿ ಹೇಳಿದ ಲಕ್ಷ್ಮಣ್, ಕಳೆದ ೧೦ ವರ್ಷಗಳಲ್ಲಿ ಕ್ಷೇತ್ರಕ್ಕೆ ಯಾವುದೇ ಕೆಲಸ ಆಗಿಲ್ಲ. ಕೇವಲ ಕೋಮು ದ್ವೇಷ ಸೃಷ್ಟಿಸಿದ್ದಷ್ಟೇ ಸಾಧನೆಯಾಗಿದೆ. ಈಗ ಕೇಂದ್ರದಲ್ಲಿ ನಿಮ್ಮದೇ ಸರ್ಕಾರ ಇದೆ. ನೀವಾದರೂ ಕೊಡಗಿನ ಜನತೆಯ ನಿರೀಕ್ಷೆಗೆ ತಕ್ಕ ಕೆಲಸ ಮಾಡಬೇಕು. ೫ ವರ್ಷ ನಂತರ ಮತ್ತೆ ಸುಮ್ಮನೆ ಜನರ ಮುಂದೆ ಬರುವಂತೆ ಆಗಬಾರದು ಎಂದು ಕಿವಿಮಾತು ಹೇಳಿದರು.
ಈ ಚುನಾವಣೆಯಲ್ಲಿ ನನ್ನ ಸೋಲಿಗೆ ನಾನೇ ಕಾರಣವಾಗಿದ್ದೇನೆ. ಮತದಾರರು ಕಾಂಗ್ರೆಸ್ ವಿರುದ್ಧ ಮತಚಲಾವಣೆ ಮಾಡಿದದ್ದಾರೋ ಅಥವಾ ವ್ಯಕ್ತಿ ವಿರುದ್ಧ ಮತ ಹಾಕಿದ್ದಾರೋ ಎನ್ನುವ ಬಗ್ಗೆ ಚರ್ಚೆ ನಡೆಸಲಾಗುವುದು. ಮುಂದೆಯೂ ನಾನು ಜನರ ಜತೆಗೆ ಇರುತ್ತೇನೆ. ಜನರಿಗಾಗಿ ಕೆಲಸ ಮಾಡುತ್ತೇನೆ. ವಾರದಲ್ಲಿ ಒಂದು ದಿನ ಮಡಿಕೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಲಭ್ಯವಿರುತ್ತೇನೆ. ಮತ ಕೊಟ್ಟವರ ಋಣ ತೀರಿಸುವ ಕೆಲಸ ಮಾಡಲಾಗುವುದು ಎಂದರು.
ರಾಜ್ಯದಲ್ಲಿ ಜಾತಿ ದ್ರುವೀಕರಣ ಆಗಿರುವುದು ಈ ಚುನಾವಣೆಯಲ್ಲಿ ಕಂಡುಬರುತ್ತಿದೆ. ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯೂ ಕೆಲಸ ಮಾಡಿದೆ ಎನ್ನುವುದು ಸ್ಪಷ್ಟವಾಗುತ್ತಿದೆ. ಬಿಜೆಪಿ ಮತ್ತು ಜೆಡಿಎಸ್ ಚುನಾವಣೆಯಲ್ಲಿ ಒಟ್ಟಾಗಿ ಕೆಲಸ ಮಾಡಿದಂತೆ ಅಭಿವೃದ್ಧಿಯಲ್ಲೂ ಕೆಲಸ ಮಾಡಲಿ. ಗ್ಯಾರಂಟಿ ನಿಲ್ಲಿಸಬೇಕೆಂದು ಹೇಳಿಲ್ಲ. ಮತ್ತೊಮ್ಮೆ ಪರಿಶೀಲನೆ ಮಾಡಬೇಕು ಎಂದಿದ್ದೆ. ಯಾವುದೇ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ನಿಲ್ಲಿಸುವುದಿಲ್ಲ. ವ್ಯವಸ್ಥೆ ಸ್ಯಾಡಿಸ್ಟ್ ಎಂದಿದ್ದೇನೆಯೇ ಹೊರತೂ ಮತದಾರರಿಗೆ ಹೇಳಿಲ್ಲ ಎಂದೂ ಇದೇ ವೇಳೆ ಸ್ಪಷ್ಟನೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ ಲೋಕಸಭಾ ಚುನಾವಣೆಗೆ ವಿಧಾನಸಭಾ ಚುನಾವಣಾ ಮಾದರಿಯಲ್ಲಿ ಪಕ್ಷದಿಂದ ಸಂಘಟಿತ ಕೆಲಸ ಆಗಿದೆ. ಆದರೂ ಸೋಲಬೇಕಾಯಿತು. ಜನರ ತೀರ್ಮಾನ ಗೌರವಿಸಲಾಗುವುದು ಎಂದರು.