ಜಿಲ್ಲೆ

ಲೆಕ್ಕ ಪತ್ರಗಳನ್ನು ಸಮಗ್ರವಾಗಿ ಪರಿಶೀಲಿಸಿ

Dharwada - Santosh Vaidya

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಲೆಕ್ಕ ಪರಿಶೋಧಕರು ಸಹಕಾರಿ ಸಂಘಗಳ ವಾರ್ಷಿಕ ಲೆಕ್ಕ ಪತ್ರಗಳನ್ನು ಕೂಲಂಕುಶವಾಗಿ ಪರಿಶೀಲಿಸಬೇಕು ಎಂದು ಸಹಕಾರ ಇಲಾಖೆಯ ಜಂಟಿ ನಿಬಂಧಕ ಡಾ. ಸುರೇಶ ಗೌಡ ಹೇಳಿದರು.

ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ ಹುಬ್ಬಳ್ಳಿ ಶಾಖೆಯು ಕರ್ನಾಟಕದಲ್ಲಿ ಸಹಕಾರಿ ಸಂಘಗಳ ಲೆಕ್ಕ ಪರಿಶೋಧನೆ ಕುರಿತು ಹುಬ್ಬಳ್ಳಿಯಲ್ಲಿ ಗುರುವಾರ ಆಯೋಜಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ 1959ರ ಸಹಕಾರ ಕಾಯ್ದೆಗೆ ತಿದ್ದುಪಡಿ ಮಾಡಿ ಸಹಕಾರಿ ಸಂಘಗಳಿಗೆ ಹೆಚ್ಚಿನ ಸ್ವಾಯುತ್ತ ನೀಡಲಾಗಿದೆ. ಅದೇ ರೀತಿ ಸಹಕಾರ ಲೆಕ್ಕ ಪರಿಶೋಧನೆಯನ್ನು 2014ರ ನಂತರ ಚಾರ್ಟರ್ಡ್ ಅಕೌಂಟೆಂಟ್​ಗಳಿಗೆ ವಹಿಸಲಾಗಿದೆ ಎಂದರು.

ಲೆಕ್ಕಪರಿಶೋಧಕರು ಸಹಕಾರಿ ಸಂಘಗಳ ಆಡಿಟ್ ಕಾರ್ಯ ನಿರ್ವಹಿಸುವಾಗ ಸಹಕಾರ ಕಾಯ್ದೆ ಕಲಂ 63 ನಿಯಮ 29ರ ಅಡಿಯಲ್ಲಿ ಸಮಗ್ರವಾಗಿ ಅಭ್ಯಸಿಸಿ ಆಡಿಟ್ ವರದಿಯನ್ನು ಸೂಕ್ತ ರೀತಿಯಲ್ಲಿ ಸಲ್ಲಿಸಬೇಕು. ಇದೀಗ ಲೆಕ್ಕ ಪರಿಶೋಧಕರೇ ಈ ಆಡಿಟ್ ಕಾರ್ಯ ನಿರ್ವಹಿಸುವುದರಿಂದ ಸಹಕಾರಿ ಸಂಘಗಳ ಲೆಕ್ಕ ಪತ್ರಗಳ ಸಂಪೂರ್ಣ ಜವಾಬ್ದಾರಿಯನ್ನು ಅವರೇ ಹೊರಬೇಕಾಗುತ್ತದೆ ಮತ್ತು ಈ ಸಹಕಾರಿ ಸಂಘಗಳ ಆಡಳಿತದ ಭಾಗವಾಗಿ ಕಾರ್ಯನಿರ್ವಹಿಸುವುದು ಅಗತ್ಯವಾಗಿದೆ. ಹಣದ ಅಪವ್ಯಯವನ್ನು ಪತ್ತೆ ಹಚ್ಚುವ ಗರುತರ ಜವಾಬ್ದಾರಿಯು ಲೆಕ್ಕಪರಿಶೋಧಕರ ಮೇಲಿದೆ ಎಂದು ಅಭಿಪ್ರಾಯ ಪಟ್ಟರು.

ಆಡಿಟ್ ವಿಭಾಗದ ಉಪ ನಿರ್ದೇಶಕ ಮಹೇಶ್ವರಪ್ಪ ಕೆ., ನಿವೃತ್ತ ನಿರ್ದೇಶಕ ಜೆ.ಕೆ ರಾಮಪ್ಪ, ಮಂಗಳೂರಿನ ಖ್ಯಾತ ಲೆಕ್ಕ ಪರಿಶೋಧಕ ಪ್ರಸನ್ನ ಶೆಣೈ, ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು.

ಹುಬ್ಬಳ್ಳಿ ಶಾಖೆಯ ಅಧ್ಯಕ್ಷ ಧನಪಾಲ ಮುನ್ನೊಳ್ಳಿ ಸ್ವಾಗತಿಸಿದರು. ಕಾರ್ಯದರ್ಶಿ ರಿಷಭ ಉಪಾಧ್ಯಾಯ ವಂದಿಸಿದರು.