ಜಿಲ್ಲೆ

ತಿಂಗಳಿಗೊಮ್ಮೆ ಸ್ವಯಂ ಸ್ತನ ಪರೀಕ್ಷೆ ಮಾಡಿಕೊಳ್ಳಿ

ತುಮಕೂರು ಡೆಸ್ಕ್

ಕುಪ್ಪೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸ್ಮಿತಾ ಹೇಳಿಕೆ

ಹುಳಿಯಾರು: ತಿಂಗಳಿಗೊಮ್ಮೆ ಸ್ವಯಂ ಸ್ತನ ಪರೀಕ್ಷೆ ಮಾಡಿಕೊಳ್ಳುವುದರಿಂದ ಯಾವುದೇ ಅಸಾಮಾನ್ಯ ಗಂಟುಗಳು, ಊತ ಹಾಗೂ ಇತರ ಬದಲಾವಣೆಗಳನ್ನು ಪತ್ತೆ ಹಚ್ಚಿದರೆ ಆರಂಭಿಕ ಹಂತದ ಸ್ತನ ಕ್ಯಾನ್ಸರ್​ನ್ನು ಕಂಡುಹಿಡಿಯಕು ಸಾಧ್ಯ ಎಂದು ಕುಪ್ಪೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸ್ಮಿತಾ ತಿಳಿಸಿದರು.

ಕುಪ್ಪೂರು ಗ್ರಾಮ ಪಂಚಾಯಿತಿ ಮಟ್ಟದ ಅಕ್ಷಯ ಸಂಜೀವಿನಿ ಒಕ್ಕೂಟದಿಂದ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ನಿಯಮಿತವಾಗಿ ಎಲ್ಲರೂ ರಕ್ತದ ಒತ್ತಡ, ಮಧುಮೇಹ, ಥೈರಾಯ್ಡ್​ ಬಗ್ಗೆ ಪರೀಕ್ಷಿಸಿಕೊಂಡು, ಚಿಕಿತ್ಸೆ ಪಡೆದು ನಿಯಂತ್ರಣದಲ್ಲಿಟ್ಟುಕೊಳ್ಳಬೇಕೆಂದು ಸಲಹೆ ನೀಡಿದರು.

ಚಿಕ್ಕನಾಯಕನಹಳ್ಳಿ ತಾಪಂ ಕಾರ್ಯಕ್ರಮ ವ್ಯವಸ್ಥಾಪಕ ಎಚ್​,ಕೆ.ರವಿ ಮಾತನಾಡಿ, ಸಂಜೀವಿನಿ ಒಕ್ಕೂಟಗಳು ಸ್ವಸಹಾಯ ಸಂಘದಿಂದ ಪ್ರಾರಂಭವಾಗಿ ವಾರ್ಡ್​, ನಂತರ ಒಕ್ಕೂಟವಾಗಿ ರಚನೆಯಾಗಿದ್ದು, ಸರ್ಕಾರದಿಂದ ಪಡೆದ ಅನುದಾನದಲ್ಲಿ ಮಹಿಳೆಯರಿಗೆ ಸಾಲ ಸೌಲಭ್ಯ, ತರಬೇತಿ, ಮಾರ್ಕೆಟಿಂಗ್​ ಮುಂತಾದವುಗಳ ಬಗ್ಗೆ ಸಲಹೆ ನೀಡಿ, ಮಹಿಳೆಯರನ್ನು ಸಬಲೀಕರಣ ಮಾಡುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಚಿಕ್ಕನಾಯಕನಹಳ್ಳಿ ಆರ್ಥಿಕ ಸಾಕ್ಷರತಾ ಸಲಹೆಗಾರ ಆರ್​.ಎಂ.ಕುಮಾರಸ್ವಾಮಿ ಮಾತನಾಡಿ, ಕೆನರಾ ಬ್ಯಾಂಕಿನಲ್ಲಿ ಮಹಿಳೆಯರಿಗೋಸ್ಕರ ಕೆನರಾ ಎಂಜಲ್​ ಎಂಬ ಉಳಿತಾಯ ಖಾತೆಯನ್ನು ಪರಿಚಯಿಸಿದ್ದು, ಕೇವಲ 5000, 30000, ಹಾಗೂ ಒಂದು ಲಕ್ಷದವರೆಗೆ ಹಣವನ್ನು ಉಳಿತಾಯ ಖಾತೆಯಲ್ಲಿ ತೊಡಗಿಸಿದಲ್ಲಿ ಕ್ಯಾನ್ಸರ್​ ಟ್ರೀಟ್ಮೆಂಟಿಗಾಗಿ ಮೂರು ಲಕ್ಷ ದಿಂದ 10 ಲಕ್ಷದವರೆಗೆ ಉಚಿತವಾಗಿ ಹಣ ಪಡೆಯಬಹುದು ಎಂದು ತಿಳಿಸಿದರು.